ಬೆಂಗಳೂರು: ನಗರದಲ್ಲಿ ಮುಂದುವರಿದ ಕೊರೊನಾ ಅಟ್ಟಹಾಸಕ್ಕೆ ಪಾಲಿಕೆ ಸದಸ್ಯರೂ ಬೆಚ್ಚಿ ಬಿದ್ದಿದ್ದಾರೆ. ನಿಯಂತ್ರಣ ಕೈತಪ್ಪಿ ಹೋಗಿದ್ದು, ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಹೆಚ್ಚು ಜನರಿಗೆ ಸೋಂಕು ಹರಡುತ್ತಿದೆ. ಹೀಗಾಗಿ ನಗರವನ್ನು ಲಾಕ್ಡೌನ್ ಮಾಡಿ, ಕೊರೊನಾ ನಿಯಂತ್ರಿಸಿ ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಬಿಬಿಎಂಪಿ ಅಬ್ದುಲ್ ಪ್ರತಿಪಕ್ಷ ನಾಯಕ ವಾಜಿದ್, ದಿನ ನಿತ್ಯ ಬೆಂಗಳೂರಲ್ಲಿ ಸೋಂಕು ಹೆಚ್ಚಾಗುತ್ತಿದೆ. ವಾರದಲ್ಲಿ ಏಳರಿಂದ ಹತ್ತು ಸಾವಿರ ಕೇಸ್ ದಾಖಲಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ ಅಂತ ಮನೆಯಲ್ಲೇ ಹೋಂ ಕ್ವಾರಂಟೈನ್ ಮಾಡ್ತಿದೀರಿ. ಪ್ರಾಥಮಿಕ, ದ್ವಿತೀಯ ಸಂಪರ್ಕಿತರಿಗೂ ಹರಡುವ ಸಾಧ್ಯತೆ ಇದೆ ಎಂದರು.
ಅಕ್ಕಪಕ್ಕದ ಮನೆಯವರೂ ಹೆದರುತ್ತಿದ್ದು, ಹೀಗಾಗಿ ಬೆಂಗಳೂರನ್ನು ಒಂದು ವಾರ ಲಾಕ್ ಡೌನ್ ಮಾಡಿ, ಹತೋಟಿಗೆ ತರಲು ಪ್ರಯತ್ನಿಸಬೇಕು. ಮತ್ತೆಯೂ ಹೆಚ್ಚಾದ್ರೆ ಮತ್ತೊಂದು ಹದಿನೈದು ದಿನಕ್ಕೆ ಲಾಕ್ಡೌನ್ ವಿಸ್ತರಿಸಬೇಕೆಂದು ಮನವಿ ಮಾಡಿದ್ದಾರೆ.
ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಮಾತನಾಡಿ, ಸಿಎಂ ಬಿಎಸ್ವೈ ನಾಳೆ ಪಾಲಿಕೆ ಸದಸ್ಯರ ಜೊತೆ ಸಭೆ ನಡೆಸಲಿರುವ ಮಾಹಿತಿ ಇನ್ನೂ ಬಂದಿಲ್ಲ. ಆದರೆ ನಗರದಲ್ಲಿ ರಸ್ತೆ ರಸ್ತೆಗೂ ಕೊರೊನಾ ಹರಡಿದೆ. ಇದನ್ನು ನಿಯಂತ್ರಿಸಲು ಸಿಎಂಗೆ ನಾವೂ ಕೂಡಾ ಮನವಿ ಮಾಡುತ್ತೇವೆ ಎಂದರು.
ರಸ್ತೆ ರಸ್ತೆಯಲ್ಲಿ ಹೆಣ ಬೀಳುವ ಪರಿಸ್ಥಿತಿ ಬಂದಿರುವುದು ದುರಂತ. ಹತ್ತು ಸಾವಿರ ಹಾಸಿಗೆ ಮಾಡಿದ್ರೆ ಪ್ರಯೋಜನವಿಲ್ಲ. ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನೂರು ವಾರ್ಡ್ಗಳ ಆಸ್ಪತ್ರೆ ಮಾಡಬೇಕಿತ್ತು. ಲಾಕ್ಡೌನ್ ಕೂಡಾ ಮುಂದುವರಿಸಬೇಕಿತ್ತು. ಈಗಲೂ ಮಾಡಿದ್ರೆ ಉತ್ತಮ ಎಂದರು.
ಪ್ರಕರಣ ಹೆಚ್ಚಾಗುತ್ತಿರುವುದರಿಂದ ದಯವಿಟ್ಟು ಲಾಕ್ಡೌನ್ ಮಾಡಿ, ಜನರ ಜೀವ ಮುಖ್ಯ. ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸಿಗುತ್ತಿಲ್ಲ. ಆಸ್ಪತ್ರೆಗಳೂ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಬಡವರಿಗೂ ಚಿಕಿತ್ಸೆ ನೀಡಲು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಪಾಲಿಕೆ ಸದಸ್ಯ ಚಂದ್ರಪ್ಪ ಮನವಿ ಮಾಡಿದರು.