ಬೆಂಗಳೂರು: ನಗರದಲ್ಲಿ ಗಣೇಶ ಹಬ್ಬದ ತಯಾರಿ ಜೋರಾಗಿದೆ. ಬಿಬಿಎಂಪಿ ಪಾಲಿಕೆಯಿಂದ ಗಣೇಶ ನಿಮಜ್ಜನೆಗೆ ಕೆರೆ ಕಲ್ಯಾಣಿಗಳು ಸಿದ್ಧವಾಗಿದ್ದು, ಅನಾಹುತ ತಪ್ಪಿಸಲು ಪಾಲಿಕೆ ನುರಿತ ಈಜುಗಾರರನ್ನು ತಾತ್ಕಾಲಿಕ ನಿಯೋಜಿಸುತ್ತಿದೆ. ಮನೆ, ಕಚೇರಿ ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ವಿಸರ್ಜನೆಗೆ ನೂರಕ್ಕೂ ಅಧಿಕ ಸ್ಥಳಗಳನ್ನು ಪಾಲಿಕೆ ವ್ಯವಸ್ಥೆ ಮಾಡಿದೆ. ಗಣೇಶ ಮೂರ್ತಿ ನಿಮಜ್ಜನೆಗೆ ಮನೆಗಳಿಗೆ ಹತ್ತಿರದಲ್ಲಿಯೇ ಪ್ರತ್ಯೇಕ ವ್ಯವಸ್ಥೆಯನ್ನು ಬಿಬಿಎಂಪಿ ಮಾಡಿದೆ.
ಪಾಲಿಕೆಯ 8 ವಲಯಗಳ 27 ವಿಧಾನಸಭಾ ಕ್ಷೇತ್ರಗಳಲ್ಲಿ ತಾತ್ಕಾಲಿಕ ಸಂಚಾರಿ ಟ್ಯಾಂಕರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. 5 ಇಂಚಿನಿಂದ 3 ಅಡಿ ಎತ್ತರದ ಎಲ್ಲ ಮಣ್ಣಿನ ಗಣೇಶ ಮೂರ್ತಿಗಳನ್ನು ಮೊಬೈಲ್ ಟ್ಯಾಂಕರ್‌ಗಳಲ್ಲಿ ನಿಮಜ್ಜನ ಮಾಡಲು ತಯಾರಿ ನಡೆಸಿದೆ. ದೊಡ್ಡ ಮೂರ್ತಿಗಳ ನಿಮಜ್ಜನ ಮಾಡಲು ಒಟ್ಟು 12 ತಾತ್ಕಾಲಿಕ ಕಲ್ಯಾಣಿಗಳನ್ನು ಬಿಬಿಎಂಪಿ ವ್ಯವಸ್ಥೆ ಮಾಡಿದೆ.
ನಗರದ ಯಡಿಯೂರು, ಹೆಬ್ಬಾಳ, ಸ್ಯಾಂಕಿ ಟ್ಯಾಂಕಿ ಕೆರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗಣೇಶ ನಿಮಜ್ಜನೆಗೆ ಜನರು ಬರುವ ಸಾಧ್ಯತೆ ಇದ್ದು, ಕಲ್ಯಾಣಿಗಳಲ್ಲಿ ಹೊಳೆತ್ತಿ, ಸ್ವಚ್ಛಗೊಳಿಸಿ, ಬಣ್ಣ ಬಳಿಯಲಾಗುತ್ತಿದೆ. ನಗರದ ಯಡಿಯೂರು ಕೆರೆಯಲ್ಲಿ ದೊಡ್ಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗಣೇಶ ವಿಸರ್ಜನೆ ಮಾಡಲು ಬರುವ ಸಾಧ್ಯತೆ ಇರುವುದರಿಂದ ಹೈಟೆಕ್ ವ್ಯವಸ್ಥೆ ಮಾಡಲಾಗಿದೆ.
![Precautionary measures for Ganesh Chaturthi celebration in bengaluru](https://etvbharatimages.akamaized.net/etvbharat/prod-images/16-09-2023/19532160_thum.jpg)
ಪ್ರತಿ ವರ್ಷದಂತೆ ಪಾಲಿಕೆ ವತಿಯಿಂದ ಗಣೇಶ ನಿಮಜ್ಜನಕ್ಕೆ ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಸೇರಿದಂತೆ ಮುಂತಾದ ಕೆರೆಗಳಲ್ಲಿ ಮತ್ತು ಕಲ್ಯಾಣಿಗಳಲ್ಲಿ ಮೂರ್ತಿಗಳ ನಿಮಜ್ಜನೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗಣೇಶ ಹಬ್ಬ ಆಚರಣೆ: ಬಿಬಿಎಂಪಿಯಿಂದ ಪಿಒಪಿ ಮೂರ್ತಿ ನಿಷೇಧ ಸೇರಿ ಹಲವು ರೂಲ್ಸ್
ಪಿಒಪಿ ಗಣೇಶ ಮೂರ್ತಿ ನಿಷೇಧ: ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಮಯದಲ್ಲಿ ಪೊಲೀಸರು, ಬೆಸ್ಕಾಂ, ಪಾಲಿಕೆ, ಅಗ್ನಿಶಾಮಕ, ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ಸಲಹೆ, ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಿಸರ್ಜನಾ ಸ್ಥಳದಲ್ಲಿ ತ್ಯಾಜ್ಯವನ್ನು ಒಂದು ಕಡೆ ಹಾಕಿದರೆ ಸ್ವಚ್ಛತೆಗೆ ಅನುಕೂಲವಾಗಲಿದೆ. ಪಿಒಪಿ ಗಣೇಶ ಮೂರ್ತಿಗಳ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಹಬ್ಬದ ಪ್ರಯುಕ್ತ ಮೂರ್ತಿಗಳ ಮಾರಾಟ ಜೋರು: ಟ್ಯಾನರಿ ರಸ್ತೆ, ಶಿವಾಜಿನಗರ, ಬಾಣಸವಾಡಿ, ಹಲಸೂರು, ಮಲ್ಲೇಶ್ವರ, ಯಶವಂತಪುರ ಸೇರಿದಂತೆ ನಾನಾ ಸ್ಥಳಗಳಲ್ಲಿ ಗೌರಿ ಗಣೇಶನ ಮೂರ್ತಿಗಳ ತಯಾರಿ ಕಾರ್ಯ ಹಾಗೂ ಮಾರಾಟ ಭರದಿಂದ ಸಾಗಿದೆ. ಗೌರಿ ಮೂರ್ತಿಗಳು 100 ರೂ. ನಿಂದ 2000 ರೂ.ವರೆಗೆ ಹಾಗೂ ಗಣಪತಿ ಮೂರ್ತಿಗಳು 100 ರೂ. ನಿಂದ 2 ಲಕ್ಷ ರೂ.ವರೆಗೆ ಮಾರಾಟವಾಗುತ್ತಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗೌರಿ ಗಣೇಶ ಮೂರ್ತಿಗಳ ದರದಲ್ಲಿ ಶೇ.20ರಷ್ಟು ಏರಿಕೆಯಾಗಿದೆ. ಈ ಬಾರಿ ಕಾರ್ಮಿಕರ ಕೊರತೆ, ಜೇಡಿಮಣ್ಣಿನ ಕೊರತೆಯಿಂದಾಗಿ ಮೂರ್ತಿಗಳ ತಯಾರಿ ವೆಚ್ಚ ಏರಿಕೆಯಾಗಿದೆ ಎಂದು ಯಶವಂತಪುರದ ಗಣೇಶ ಮೂರ್ತಿಗಳ ಮಾರಾಟಗಾರ ಆನಂದ್ ಗಣೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಪಿಒಪಿ ಗಣೇಶ ಮೂರ್ತಿ ನಿಷೇಧ: ಮಣ್ಣಿನ ಗಣಪತಿ ಪೂಜಿಸಿ, ಪರಿಸರ ಸಂರಕ್ಷಿಸುವಂತೆ ಸಚಿವ ಖಂಡ್ರೆ ಮನವಿ