ಬೆಂಗಳೂರು: ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಪಾಯಿಂಟ್ ಆಪ್ ಆರ್ಡರ್ ತರಲು ಯತ್ನಿಸಿದ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್, ತಮ್ಮ ಪಕ್ಷದವರಿಂದಲೇ ಪೇಚಿಗೆ ಸಿಲುಕಿದ ಪ್ರಸಂಗ ನಡೆಯಿತು.
ಪರಿಷತ್ನಲ್ಲಿ ಪ್ರತಿಯೊಬ್ಬರೂ ಮಂತ್ರಿಗಳನ್ನು 'ಸಚಿವರು' ಎಂದು ಕರೆಯುತ್ತಿದ್ದಾರೆ. ಸಚಿವರು ಎಂದರೆ ಇಂಗ್ಲಿಷ್ನಲ್ಲಿ ಸೆಕ್ರೆಟರಿ ಎಂದರ್ಥ. ಅಂದರೆ ಕನ್ನಡದಲ್ಲಿ ಕಾರ್ಯದರ್ಶಿ ಎಂಬ ಅರ್ಥ ಇದೆ. ಆದ್ದರಿಂದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮಂತ್ರಿ ಅನ್ನುವುದು ಸೂಕ್ತ. ಸಚಿವ ಎನ್ನುವ ಪದ ಬಳಕೆ ನಿಲ್ಲಿಸಬೇಕು. ಈ ಸಂಬಂಧ ಮಾತನಾಡಲು ಅವಕಾಶ ಕೊಡಿ ಎಂದರು.
ಪ್ರತಿಪಕ್ಷ ಸದಸ್ಯರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಬದಲಾಗಿ ಕಾಂಗ್ರೆಸ್ ಸದಸ್ಯ ಹೆಚ್.ಎಂ.ರೇವಣ್ಣ, ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರಿಂದ ವಿರೋಧ ವ್ಯಕ್ತವಾಯಿತು. ಪಟ್ಟು ಬಿಡದ ಪ್ರಕಾಶ್ ರಾಥೋಡ್ ಸದನದಲ್ಲಿ ಮಾತಿಗೆ ಅವಕಾಶ ನೀಡಬೇಕೆಂದು ಒತ್ತಡ ಹಾಕಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬೇರೆ ಚರ್ಚೆ ಸರಿಯಲ್ಲ. ಪ್ರತ್ಯೇಕ ಕಾಲಾವಕಾಶ ನೀಡುತ್ತೇನೆ. ಈಗ ಚರ್ಚೆ ಬೇಡ ಎಂದರು. ಆದರೂ ಸಮಾಧಾನಗೊಳ್ಳದ ಸದಸ್ಯ ರಾಥೋಡ್ ತಮಗೆ ಮಾತಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ಆಡಳಿತ ಪಕ್ಷದ ಹಿರಿಯ ಸದಸ್ಯ ಆಯನೂರು ಮಂಜುನಾಥ್ ಮಧ್ಯಪ್ರವೇಶಿಸಿ ಇದರ ಬಗ್ಗೆ ಪ್ರತ್ಯೇಕ ಅವಕಾಶ ನೀಡಿ ಎಂದು ಪ್ರಸ್ತಾವನೆಗೆ ಕೊನೆ ಹಾಡುವಂತೆ ಮಾಡಿದರು.
ಹಲವು ವರ್ಷದಿಂದ ಸಚಿವ ಎನ್ನುವ ಪದ ಜಾರಿಯಲ್ಲಿರುವ ಹಿನ್ನೆಲೆ ಇದನ್ನು ಬದಲಿಸಬೇಕೆಂದು ಪಾಯಿಂಟ್ ಆಫ್ ಆರ್ಡರ್ ಅಡಿ ಚರ್ಚೆಗೆ ಮುಂದಾದ ಪ್ರಕಾಶ್ ರಾಥೋಡ್ ಸ್ವಪಕ್ಷೀಯ ಸದಸ್ಯರಿಂದಲೇ ಸಾಕಷ್ಟು ಪ್ರತಿರೋಧ ಎದುರಿಸಿದ್ದು ವಿಪರ್ಯಾಸ.