ಬೆಂಗಳೂರು: ನಾನು ನಾಲ್ಕೈದು ವರ್ಷಕ್ಕೆ ಬಂದಿಲ್ಲ. ಹದಿನೈದು ವರ್ಷ ಇಲ್ಲಿಯೇ ಇರುತ್ತೇನೆ. ಗೆದ್ದರೂ ಕೆಲಸ ಮಾಡುತ್ತೇನೆ, ಸೋತರೂ ಕೆಲಸ ಮಾಡಿಸುತ್ತೇನೆ. ಗೆದ್ದವರು ನಿದ್ದೆ ಮಾಡಲು ಬಿಡಲ್ಲ. ಯಾವುದೇ ಪಕ್ಷಕ್ಕೂ ಸೇರಲ್ಲ. ಆದರೆ ಷರತ್ತುಬದ್ಧ ಬೆಂಬಲ ಕೊಡಲು ಸಿದ್ಧ ಎಂದು ಪ್ರಕಾಶ್ ರೈ ತಿಳಿಸಿದ್ದಾರೆ.
ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷದಿಂದಲೂ ನಾನು ಟಿಕೆಟ್ ನಿರೀಕ್ಷೆ ಮಾಡಿರಲಿಲ್ಲ. ಆದರೆ ಕಾಂಗ್ರೆಸ್ನವರಿಗೆ ಅಭ್ಯರ್ಥಿ ಹಾಕದಂತೆ ಮನವಿ ಮಾಡಿದ್ದೆ. ಜನವರಿ 1ರಂದೇ ಸ್ವತಂತ್ರ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದೆ. ಅದಕ್ಕೆ ಬದ್ಧನಾಗಿ ಇದ್ದೇನೆ. ಪಕ್ಷ ಸೇರಿದ್ದರೆ ಪರ್ಯಾಯ ರಾಜಕಾರಣ ಆಗುತ್ತಿರಲಿಲ್ಲ. ಇತರೆ ರಾಜಕಾರಣಿಗಳಂತೆ ಅಂತ ನಾನೂ ಆಗುತ್ತಿದ್ದೆ. ಚುನಾವಣೆ ನಂತರ ನಾನು ಯಾವುದೇ ಪಕ್ಷವನ್ನೂ ಸೇರಲ್ಲ. ಆದರೆ ಬೆಂಗಳೂರು ಕೇಂದ್ರ ಮತ್ತು ಕರ್ನಾಟಕದ ಸಮಸ್ಯೆಗೆ ಆದ್ಯತೆ ನೀಡುವ ಪಕ್ಷಕ್ಕೆ ಷರತ್ತಿನ ಮೇರೆಗೆ ಬೆಂಬಲ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಎರಡೂ ಪಕ್ಷದ ಪ್ರಣಾಳಿಕೆ ಹಾಸ್ಯಾಸ್ಪದವಾಗಿದೆ. ಸುಸ್ಥಿರ ಬಜೆಟ್ ಇಬ್ಬರಿಗೂ ಗೊತ್ತಿಲ್ಲ. ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ಇಲ್ಲ. ಬರೀ ರಕ್ಷಣಾ ಕ್ಷೇತ್ರಕ್ಕೆ ಒತ್ತು ನೀಡಿದ್ದೇವೆ ಎನ್ನುತ್ತಾರೆ. ಎರಡೂ ಪಕ್ಷ ಕುಟುಂಬಕ್ಕೆ ಆರು ಸಾವಿರ ಕೊಡುವ ಭರವಸೆ ನೀಡಿವೆ. ಆದರೆ ಅವರ ಬಜೆಟ್ನಲ್ಲಿ ನಮಗೆ ಯಾವುದೇ ವಿಷನ್ ಕಾಣುತ್ತಿಲ್ಲ. ನಾಳೆ ನಾನು ಪ್ರಣಾಳಿಕೆ ಬಿಡುಗಡೆ ಮಾಡಲಿದ್ದೇನೆ ಎಂದರು.
ಚುನಾವಣೆಯಲ್ಲಿ ನಾನು ಒಬ್ಬೊಂಟಿ ಅಲ್ಲ. ಆಪ್, ಸಿಪಿಯು, ಸಿಪಿಎಂ ಹಾಗೂ ವಿವಿಧ ಸಣ್ಣ ಪಕ್ಷಗಳು, ಮಹಿಳಾ ಸಂಘಟನೆ, ಕನ್ನಡ, ತಮಿಳು, ತೆಲುಗು ಸಂಘಟನೆಗಳ ಜನ ನಮ್ಮೊಂದಿಗಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಕೂಡ ಇಂದು ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದರು.
ಜಾತ್ಯಾತೀತ ವಿಚಾರದಲ್ಲಿ ಬರೀ ಬಿಜೆಪಿಯನ್ನು ಯಾಕೆ ಬೈಯುತ್ತೀರಿ, ಕಾಂಗ್ರೆಸ್, ಜೆಡಿಎಸ್ ಕೂಡ ಜಾತ್ಯಾತೀತ ಅಲ್ಲ. ಯಾವ ಸಮುದಾಯಕ್ಕೆ ಎಲ್ಲಿ ಸೀಟು ಕೊಟ್ಟರೆ ಅನುಕೂಲ, ಅಲ್ಪಸಂಖ್ಯಾತರಿಗೆ ಸೀಟು ಕೊಟ್ಟರೆ ನಮಗೆ ಎಲ್ಲಿ ಲಾಭ ಆಗುತ್ತೆ ಎಂದು ಲೆಕ್ಕ ಹಾಕುತ್ತಾರೆ. ಆದರೆ ನಾನು ಜಾತ್ಯಾತೀತ. ನನಗೆ ಎಲ್ಲರೂ ಒಂದೇ. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದೆ. ಆದರೆ ಮೈತ್ರಿ ಮೇಲ್ಮಟ್ಟದಲ್ಲಿ ಮಾತ್ರ ಆಗಿದೆ ಎಂದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನನ್ನ ಬಾಲ್ಯ ಕಳೆದಿದ್ದೇನೆ. ಶಾಲೆ, ಆಟ, ಪಾಠ, ಕಾಲೇಜು, ದಶಕದ ಸಾಹಿತ್ಯ, ರಂಗಭೂಮಿ ಒಡನಾಟ, ಸಿನಿಮಾರಂಗ ಪ್ರವೇಶ ಎಲ್ಲವೂ ಈ ಕ್ಷೇತ್ರದಲ್ಲಿಯೇ ಆಗಿದೆ. ನನ್ನ ನೆನಪು ಎಲ್ಲವೂ ಇಲ್ಲಿಯೇ ಇದೆ. ಹಾಗಾಗಿ ನಾನು ಇಲ್ಲಿಂದ ಸ್ಪರ್ಧೆ ಮಾಡಿದ್ದೇನೆ ಎಂದು ಕ್ಷೇತ್ರದ ಆಯ್ಕೆಯನ್ನು ರೈ ಸಮರ್ಥಿಸಿಕೊಂಡರು.
ಮತದಾನಕ್ಕೆ ಕೊನೆಯ 20 ದಿನ ರಾಜಕೀಯ ಪಕ್ಷಗಳು ಮಾಡುವುದನ್ನು ನಾನು ಕಳೆದ 6 ತಿಂಗಳಿಂದಲೇ ಮಾಡುತ್ತಿದ್ದೇನೆ. ಸ್ಲಂಗಳು, ಕಾಲೋನಿಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದೇನೆ. 2 ಸಾವಿರ ಸ್ಲಂಗಳು ಬೆಂಗಳೂರಿನಲ್ಲಿವೆ. ಅಲ್ಲಿನವರನ್ನು ಮತಬ್ಯಾಂಕ್ ಮಾಡಿಕೊಳ್ಳಲಾಗಿದೆ. ಎಲ್ಲಾ ಸರ್ಕಾರಿ ಶಾಲೆಗಳನ್ನು ಕಡೆಗಣಿಸಲಾಗಿದೆ, ವ್ಯವಸ್ಥೆ ಸರಿಯಿಲ್ಲ. ನಮ್ಮ ಶಾಲೆಗಳಲ್ಲಿ ಗುಣಮಟ್ಟ ಇಲ್ಲದ ಕಾರಣ ನಾವೇ ನಮ್ಮ ತೆರಿಗೆ ಹಣದಿಂದ ಕಟ್ಟಿದ ಶಾಲೆ ಬಿಟ್ಟು ಖಾಸಗಿ ಶಾಲೆ ಎನ್ನುವ ಮಾಫಿಯಾಗೆ ಹೋಗುತ್ತಿದ್ದೇವೆ. ನಾವೇ ಕಟ್ಟಿದ ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ ಸರಿಯಿಲ್ಲ ಎಂದು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದೇವೆ. ಸರ್ಕಾರ, ರಾಜಕೀಯ ಪಕ್ಷಗಳು ಈ ಮಾಫಿಯಾವನ್ನು ಬೆಳೆಸಿವೆ. ಕುಡಿಯುವ ನೀರಿನ ಪೂರೈಕೆ ವಿಚಾರದಲ್ಲಿಯೂ ಬಿಬಿಎಂಪಿ ಇದನ್ನೇ ಮಾಡುತ್ತಿದೆ. ನಗರದಲ್ಲಿ ಇದ್ದ 250 ಕೆರೆಗಳಲ್ಲಿ 50 ಕೆರೆ ಏಕಾಯ್ತು? ಮಂದಾಲೋಚನೆ ಇರಲಿಲ್ಲವೇ ಎಂದು ವಾಗ್ದಾಳಿ ನಡೆಸಿದರು.