ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿದೆ. ಅಲ್ಲದೆ, ಬಹುತೇಕ ತಾಲೂಕುಗಳು ಬರಪೀಡಿತವಾಗಿವೆ. ಹೀಗಾಗಿ ವಿದ್ಯುತ್ ಅಭಾವ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದರು.
ಸೋಮವಾರ ಬೆಸ್ಕಾಂ ಕೇಂದ್ರ ಕಚೇರಿ (ಬೆಳಕು ಭವನ)ಯಲ್ಲಿ ರಾಜ್ಯದ ಎಲ್ಲ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ರಾಜ್ಯದಲ್ಲಿನ ವಿದ್ಯುತ್ ಅಭಾವಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿನ ವಿದ್ಯುತ್ ಪರಿಸ್ಥಿತಿ ಕುರಿತು ಸತ್ಯಕ್ಕಿಂತ ಹೆಚ್ಚಾಗಿ ಸುಳ್ಳು ಸುದ್ದಿಗಳೇ ಹರಿದಾಡುತ್ತಿವೆ. ಕಳೆದ ಸಾಲಿನ ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ 8 ಸಾವಿರ ಮೆ.ವ್ಯಾ.ವಿದ್ಯುತ್ ಬೇಡಿಕೆ ಇತ್ತು. ಆದರೆ, ಈ ವರ್ಷ ಈ ಪ್ರಮಾಣ 16 ಸಾವಿರ ಮೆ.ವ್ಯಾ. ತಲುಪಿದೆ. ಏಕಾಏಕಿ ದ್ವಿಗುಣ ಬೇಡಿಕೆ ಬಂದಲ್ಲಿ ಪೂರೈಕೆ ಮಾಡುವುದು ಕಷ್ಟಕರ ಎಂದು ಹೇಳಿದರು.
ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ವಿದ್ಯುತ್ ಅಭಾವ ಎದುರಾಗದಂತೆ ನಿರ್ವಹಣೆ ಮಾಡಲಾಗಿದೆ. ರಾಜ್ಯಕ್ಕೆ ಕತ್ತಲೆ ಆವರಿಸಿದೆ, ಕಗ್ಗತ್ತಲಿನಲ್ಲಿ ಕರ್ನಾಟಕ ಎಂದು ಬಿಜೆಪಿಯ ನಾಯಕರು ಮಾಡುತ್ತಿರುವ ಆರೋಪ ನಿರಾಧಾರವಾದದ್ದು. ರಾಜ್ಯದಲ್ಲಿನ ವಿದ್ಯುತ್ ಅಭಾವಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಮೂಲ ಕಾರಣ ಎಂದು ಕಿಡಿಕಾರಿದರು. ನಾವು ವಿದ್ಯುತ್ ವಿಚಾರದಲ್ಲಿ ಅವರ ವಿರುದ್ಧ ಆರೋಪಗಳನ್ನು ಮಾಡಿಲ್ಲ. ಈ ಹಿಂದೆ ನಮ್ಮ ಸರ್ಕಾರದ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಹೆಚ್ಚು ಸಂಪನ್ಮೂಲವನ್ನು ಕ್ರೋಢೀಕರಣ ಮಾಡಿದ್ದರು. ಆದರೆ, ಅದನ್ನು ನಿಭಾಯಿಸಿಕೊಂಡು ಹೋಗುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ನಾವು ಕಾಣೆಯಾಗಿದ್ದೇವೆ ಎಂದು ಬಿಜೆಪಿಯವರು ಟೀಕಿಸುತ್ತಿದ್ದಾರೆ. ಇತ್ತೀಚಿನವರೆಗೆ ಅಧಿಕಾರದಲ್ಲಿದ್ದ ಅವರಿಗೆ ಸಮಸ್ಯೆಗಳು ಏನು ಎಂದು ಗೊತ್ತಿದೆ. ಹಿಂದಿನ ಸರ್ಕಾರದಲ್ಲಿನ ಮುಖ್ಯಮಂತ್ರಿ, ಸಚಿವರು ಸಲಹೆ ಕೊಟ್ಟರೆ ಅದನ್ನೂ ಪಡೆಯುತ್ತೇವೆ. ಆದರೂ, ವಿನಾಕಾರಣ ನಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ನಾವ್ಯಾರೂ ಕಾಣೆಯಾಗಿಲ್ಲ, ಜನರ ಪರವಾಗಿ ಹಗಲು, ರಾತ್ರಿ ಕೆಲಸ ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.
ಪಾವಗಡದಲ್ಲಿ 2300 ಮೆಗಾ ವ್ಯಾಟ್ ಉತ್ಪಾದನೆಗೆ ಯೋಜನೆ ಮಾಡಿದ್ದೇವೆ. ಸೆಕ್ಷನ್ 11ರ ಅಡಿ ಖಾಸಗಿಯಾಗಿ ವಿದ್ಯುತ್ ಉತ್ಪಾದನೆ ಮಾಡುವವರು ಸರ್ಕಾರಕ್ಕೆ ವಿದ್ಯುತ್ ಸರಬರಾಜು ಮಾಡಬೇಕು. ಇದರಿಂದ ನಮಗೆ 1500 ಮೆಗಾವ್ಯಾಟ್ ಸಿಗಲಿದೆ. ಕೇಂದ್ರದ ಗ್ರಿಡ್‌ನಿಂದಲೂ ರಾಜ್ಯಕ್ಕೆ ವಿದ್ಯುತ್ ಒದಗಿಸುವಂತೆ ಮನವಿ ಮಾಡಿದ್ದೇವೆ. ಅಲ್ಲದೆ, ಪಂಜಾಬ್, ಉತ್ತರ ಪ್ರದೇಶದಿಂದಲೂ ವಿದ್ಯುತ್ ಪಡೆಯಲು ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಜಾರ್ಜ್ ಮಾಹಿತಿ ನೀಡಿದರು.
ಸಭೆಯಲ್ಲಿ ಇಂಧನ ಮತ್ತು ಮೂಲಸೌಕರ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಲೋಡ್ ಶೆಡ್ಡಿಂಗ್ ಟೀಕಿಸುವ ಬಿಜೆಪಿ ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸಿತ್ತು?: ಡಿ.ಕೆ.ಶಿವಕುಮಾರ್