ಬೆಂಗಳೂರು: ಮಾರ್ಚ್ 21ಕ್ಕೆ ನಿಗದಿಪಡಿಸಲಾಗಿದ್ದ ಅಖಿಲ ಭಾರತ ವಕೀಲರ ಪರೀಕ್ಷೆ-16 (AIBE-XVI)ನ್ನು ಭಾರತೀಯ ವಕೀಲರ ಪರಿಷತ್ತು ಏಪ್ರಿಲ್ 25ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ಈ ಕುರಿತು ಬಿಸಿಐ ಪ್ರಕಟಣೆ ಹೊರಡಿಸಿದ್ದು, ಅದರಂತೆ ಪರೀಕ್ಷೆ ತೆಗೆದುಕೊಳ್ಳುವ ಅಧಿಯನ್ನು ಕೂಡ ವಿಸ್ತರಿಸಿದೆ. ಮೊದಲಿಗೆ ಪರೀಕ್ಷಾ ದಿನಾಂಕವನ್ನು ಮಾರ್ಚ್ 21ಕ್ಕೆ ನಿಗಪಡಿಸಿತ್ತು. ಹೊಸ ಅಧಿಸೂಚನೆಯಂತೆ ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಮಾರ್ಚ್ 22ರವರೆಗೆ ವಿಸ್ತರಿಸಲಾಗಿದೆ. ಹಾಗೆಯೇ ಆನ್ಲೈನ್ ಶುಲ್ಕ ಪಾವತಿಸಲು ಮಾರ್ಚ್ 26 ಕಡೆಯ ದಿನವಾಗಿದ್ದು, ಅರ್ಜಿ ಪೂರ್ಣಗೊಳಿಸಲು ಮಾರ್ಚ್ 31ರವರೆಗೆ ಕಾಲಾವಕಾಶವಿದೆ. ಏಪ್ರಿಲ್ 10ರಿಂದ ಆನ್ಲೈನ್ನಲ್ಲಿ ಪರೀಕ್ಷೆಗೆ ಪ್ರವೇಶ ಪತ್ರಗಳು ಲಭ್ಯವಿದ್ದು, ಏಪ್ರಿಲ್ 25ರ ಭಾನುವಾರದಂದ ಪರೀಕ್ಷೆ ನಡೆಯಲಿವೆ. 2020 ರಲ್ಲಿ ನಡೆಯಬೇಕಿದ್ದ ಎಐಬಿಇ ಪರೀಕ್ಷೆಗಳು ಕೊರೊನಾ ಸೋಂಕು ಕಾರಣಕ್ಕಾಗಿ ನಡೆದಿರಲಿಲ್ಲ.
ಹೀಗಾಗಿ 2021ರ ಜನವರಿ ಮತ್ತು ಮಾರ್ಚ್ ತಿಂಗಳಲ್ಲಿ 15 ಮತ್ತು 16ನೇ ಎಐಬಿಇ ಪರೀಕ್ಷೆಗಳನ್ನು ನಡೆಸಲು ಬಿಸಿಐ ತೀರ್ಮಾನಿಸಿತ್ತು. ಅದರಂತೆ ಜನವರಿ 24ರಂದು 15ನೇ ಎಐಬಿಇ ಪರೀಕ್ಷೆ ನಡೆದಿತ್ತು. ಆದರೆ, 15ನೇ ಎಐಬಿಇ ಪರೀಕ್ಷೆಯ ಫಲಿತಾಂಶ ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದ್ದು, ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೂ ಪರೀಕ್ಷೆ ತೆಗೆದುಕೊಳ್ಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎಐಬಿಇ -16ರ ಪರೀಕ್ಷೆಯನ್ನು ಏಪ್ರಿಲ್ 25ಕ್ಕೆ ಮುಂದೂಡಲಾಗಿದೆ. ಎಐಬಿಇ-16ನೇ ಪರೀಕ್ಷೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದ್ದು, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮೊದಲಿನಂತೆ ಪುಸ್ತಕ, ನೋಟ್ಸ್ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿದೆ. ಬದಲಿಗೆ ಬೇರ್ ಆ್ಯಕ್ಸ್ ಪುಸ್ತಕಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ ಎಂದು ಬಿಸಿಐ ಸ್ಪಷ್ಟಪಡಿಸಿದೆ. ಕಳೆದ ಜನವರಿ 24ರಂದು ದೇಶದ 45 ನಗರಗಳ 150 ಕ್ಕೂ ಅಧಿಕ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ಎಐಬಿಇ ಪರೀಕ್ಷೆಗೆ 1.20 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಕಾನೂನು ಪದವಿ ಪೂರೈಸಿ ಪರಿಷತ್ತುಗಳಲ್ಲಿ ವಕೀಲರಾಗಿ ನೋಂದಾಯಿಸಿಕೊಂಡ ವಕೀಲರು ವಕಾಲತ್ತು ಹಾಕಲು ಪರೀಕ್ಷೆ ಪಾಸ್ ಮಾಡುವುದು ಕಡ್ಡಾಯವಾಗಿದೆ.