ಬೆಂಗಳೂರು: ಜೂನ್ 30 ಕ್ಕೆ ಅಂತ್ಯಗೊಳ್ಳಲಿರುವ ಎರಡು ಶಿಕ್ಷಕರ ಕ್ಷೇತ್ರ ಹಾಗು ಎರಡು ಪದವೀಧರ ಕ್ಷೇತ್ರ ಸೇರಿ ನಾಲ್ಕು ಸ್ಥಾನಗಳ ಚುನಾವಣೆಯನ್ನು ಕೋವಿಡ್-19 ಕಾರಣದಿಂದ ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಕೊರೊನಾ ಮಾರ್ಗಸೂಚಿಯ ಪ್ರಕಾರ ಪ್ರಸ್ತುತ ಸನ್ನಿವೇಶ ಮತದಾನ ನಡೆಸಲು ಪೂರಕವಾಗಿಲ್ಲ, ಚುನಾವಣಾ ಕ್ಷೇತ್ರಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದು,ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸುವುದು,ರಾಜಕೀಯ ಪಕ್ಷಗಳ ಏಜೆಂಟರ ನಿಯೋಜನೆ,ಅಧಿಕಾರಿಗಳ ಬೆಂಬಲ,ಮತದಾನ ನಡೆಸುವ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮತ್ತು ಮತದಾನದ ದಿನ ಮತ ಚಲಾವಣೆ ಮಾಡುವ ಪ್ರಕ್ರಿಯೆ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಅಭಿಪ್ರಾಯ ಪಟ್ಟಿದೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜೂನ್ 30 ರ ಒಳಗೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ಹಾಗಾಗಿ ಸಂವಿಧಾನದ ಕಲಂ 324 ರ 16 ನೇ ಪರಿಚ್ಛೇದದ ಅನ್ವಯ ದತ್ತವಾಗಿರುವ ಅಧಿಕಾರವನ್ನು ಪ್ರಯೋಗಿಸಿ ಶಿಕ್ಷಕರ ಹಾಗು ಪದವೀಧರ ಕ್ಷೇತ್ರದ ಚುನಾವಣೆಯನ್ನು ಮುಂದೂಡಿಕೆ ಮಾಡಲಾಗುತ್ತಿದೆ. ಪರಿಸ್ಥಿತಿ ಅವಲೋಕಿಸಿ ನಂತರ ಚುನಾವಣಾ ದಿನಾಂಕ ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.