ಬೆಂಗಳೂರು: ಬಿಜೆಪಿ ಹೈಕಮಾಂಡ್ ಪ್ರತಿನಿಧಿಗಳಾಗಿ ಇಬ್ಬರು ವೀಕ್ಷಕರು ರಾಜ್ಯಕ್ಕೆ ಆಗಮಿಸಿದ್ದು, ಪ್ರತಿಪಕ್ಷ ನಾಯಕ ಹಾಗೂ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಪಕ್ಷದ ರಾಜ್ಯ ನಾಯಕರು ಮತ್ತು ಶಾಸಕರಿಂದ ಅಭಿಪ್ರಾಯ ಸಂಗ್ರಹ ಆರಂಭಿಸಿದ್ದಾರೆ. ಸದನದ ಒಳಗೆ ಮತ್ತು ಹೊರಗಡೆ ಬಿಜೆಪಿ ಹೋರಾಟ ನಡೆಸುತ್ತಿರುವ ನಡುವೆಯೇ ಆಯ್ದ ನಾಯಕರು ಪಕ್ಷದ ಕಚೇರಿಗೆ ಆಗಮಿಸಿ ಅಭಿಪ್ರಾಯ ತಿಳಿಸುತ್ತಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಆಗಮಿಸಿದ್ದಾರೆ. ಹೈಕಮಾಂಡ್ ವೀಕ್ಷಕರಾಗಿ ಇಬ್ಬರು ನಾಯಕರು ಆಗಮಿಸಿದ್ದು ಮಧ್ಯಾಹ್ನದಿಂದಲೇ ಪಕ್ಷದ ನಾಯಕರು ಮತ್ತು ಶಾಸಕರನ್ನು ಒಬ್ಬೊಬ್ಬರನ್ನಾಗಿ ಕರೆಸಿಕೊಂಡು ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ.
ವಿಧಾನಸಭೆ ಪ್ರತಿಪಕ್ಷ ನಾಯಕ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಹಾಗೂ ನೂತನ ರಾಜ್ಯಾಧ್ಯಕ್ಷರ ಆಯ್ಕೆಯಾಗಬೇಕಿದ್ದು, ಈ ಸಂಬಂಧ ಪಕ್ಷದ ಪ್ರಮುಖರು, ಶಾಸಕರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಶಾಸಕರು, ಪರಿಷತ್ ಸದಸ್ಯರು, ಪಕ್ಷದ ನಾಯಕರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಒಬ್ಬೊಬ್ಬರೇ ಬಿಜೆಪಿ ಕಚೇರಿಗೆ ಬಂದು ಅಭಿಪ್ರಾಯ ತಿಳಿಸಿ ಹೋಗುತ್ತಿದ್ದಾರೆ.
ಸಂಸದರಾದ ಡಿವಿ ಸದಾನಂದಗೌಡ, ಪಿ.ಸಿ ಮೋಹನ್, ಶಾಸಕರಾದ ಡಾ.ಅಶ್ವತ್ಥ ನಾರಾಯಣ್, ಬೈರತಿ ಬಸವರಾಜ್, ಎಸ್.ಟಿ ಸೋಮಶೇಖರ್, ಮುನಿರತ್ನ, ಶಿವರಾಮ್ ಹೆಬ್ಬಾರ್, ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಕೆ. ಗೋಪಾಲಯ್ಯ ಸೇರಿದಂತೆ ಹಲವರು ಪಕ್ಷದ ಕಚೇರಿಗೆ ಆಗಮಿಸಿ ತಮ್ಮ ಅಭಿಪ್ರಾಯವನ್ನು ವೀಕ್ಷಕರಿಗೆ ತಿಳಿಸಿದ್ದಾರೆ. ಬಿಜೆಪಿ ಪ್ರತಿಭಟನೆ ಸಂಜೆ 5 ಗಂಟೆಗೆ ಮುಗಿಯಲಿದ್ದು, ನಂತರ ಪಕ್ಷದ ಇತರ ನಾಯಕರು ಹಾಗೂ ಇಂದಿನ ಕಲಾಪ ಮುಕ್ತಾಯದ ನಂತರ ಉಳಿದ ಶಾಸಕರು ಪಕ್ಷದ ಕಚೇರಿಗೆ ಆಗಮಿಸಿ ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆ.
ನಾಳೆ ಹೊಸ ನಾಯಕರ ಆಯ್ಕೆ ಸಾಧ್ಯತೆ: ಶಾಸಕರು, ಸಂಸದರು, ಪರಿಷತ್ ಸದಸ್ಯರು ಮತ್ತು ಕೋರ್ ಕಮಿಟಿ ಸದಸ್ಯರ ಅಭಿಪ್ರಾಯ, ರಾಜ್ಯ ಘಟಕದ ಅಭಿಪ್ರಾಯ ಆಲಿಸಿದ ನಂತರ ಹೈಕಮಾಂಡ್ಗೆ ವೀಕ್ಷಕರು ವರದಿ ಸಲ್ಲಿಕೆ ಮಾಡಲಿದ್ದು, ಅದರಂತೆ ಹೈಕಮಾಂಡ್ ನಾಳೆ ಉಭಯ ಸದನಗಳಿಗೂ ಪ್ರತಿಪಕ್ಷ ನಾಯಕರ ಆಯ್ಕೆ ಮಾಡಿ ಹೆಸರು ಪ್ರಕಟಿಸಲಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಂತರ ಹೆಸರು ಪ್ರಕಟಿಸಲಿದೆ.
ಈ ಕುರಿತು ಮಾತನಾಡಿದ ಸಂಸದ ಡಿ.ವಿ ಸದಾನಂದಗೌಡ, ಬಹುಶಃ ಇವತ್ತು ಪ್ರತಿಪಕ್ಷ ನಾಯಕರ ಆಯ್ಕೆ ಆಗಬಹುದು ಅಂತಾ ನಮ್ಮ ಅನಿಸಿಕೆ ಇದೆ. ವೀಕ್ಷಕರು ನನ್ನ ಅಭಿಪ್ರಾಯ ಕೇಳಿದರು, ಅದರಂತೆ ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ, ಸಮರ್ಥ ಪ್ರತಿಪಕ್ಷ ನಾಯಕರನ್ನು ಕೊಡಿ ಅಂತಾ ಕೇಳಿದ್ದೇನೆ, ವೀಕ್ಷಕರ ಒಂದಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ, ವೀಕ್ಷಕರ ವರದಿ ಆಧರಿಸಿ ಕೇಂದ್ರದಿಂದ ಪ್ರತಿಪಕ್ಷ ನಾಯಕನ ಘೋಷಣೆ ಆಗಲಿದೆ ಎಂದರು.
ಎಲ್ಲ ಶಾಸಕರ ಅಭಿಪ್ರಾಯವನ್ನು ವಾಪಸ್ ಪ್ರತ್ಯೇಕವಾಗಿ ಕೇಳುವ ಅವಶ್ಯಕತೆ ಇಲ್ಲ, ಮೊನ್ನೆಯೇ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ಪಕ್ಷದ ಕೋರ್ ಕಮಿಟಿ ಸದಸ್ಯರು ಮತ್ತು ಪ್ರಮುಖರ ಅಭಿಪ್ರಾಯ ಪಡೆಯುವ ಸಲುವಾಗಿ ಇಂದು ವೀಕ್ಷಕರು ಬಂದಿದ್ದಾರೆ. ಅವರ ಅಭಿಪ್ರಾಯ ಪಡೆದುಕೊಂಡು ಕೇಂದ್ರಕ್ಕೆ ವರದಿ ನೀಡಲಿದ್ದಾರೆ. ನಾಳೆಯೊಳಗೆ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಸಹ ಹೇಳಿದ್ದಾರೆ.
ಪ್ರತಿಪಕ್ಷ ನಾಯಕನ ಆಯ್ಕೆ ವಿಳಂಬವಾಗಿದೆ ಎನ್ನುವುದು ನಿಜ. ಸೋಲು ಬಂದಾಗ ನಾವು ಸಹಜವಾಗಿ ಎಂದಿನ ವೇಗದಲ್ಲಿ ಇರುವುದಿಲ್ಲ, ಎಲ್ಲವನ್ನೂ ಅಳೆದೂ ತೂಗಿ ಅಂತಿಮ ಹಂತಕ್ಕೆ ಹೋಗಬೇಕು, ವಿಳಂಬ ಆಗಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಹಾಗಂತ ಕೈಚಲ್ಲಿ ಕುಳಿತಿಲ್ಲ. ನಾವು ಸದಾ ಹೋರಾಟ ಮಾಡಿಕೊಂಡು ಬಂದವರು, ಈಗಲೂ ಹೋರಾಟ ಮಾಡಿಕೊಂಡು ಮತ್ತೆ ಅಧಿಕಾರಕ್ಕೆ ಮರಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದು ಹೊಂದಾಣಿಕೆ ಪ್ರಶ್ನೆ ಅಲ್ಲ: ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಆರೋಪವನ್ನು ಯಡಿಯೂರಪ್ಪ ಬೆಂಬಲಿಸಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸದಾನಂದಗೌಡ, ಸರ್ಕಾರ ಹಾದಿ ತಪ್ಪಿದಾಗ ಪ್ರತಿಪಕ್ಷದಲ್ಲಿ ಕುಳಿತವರು ಯಾರೇ ಯಾವುದೇ ವಿಷಯ ಎತ್ತಿದಾಗ ಧ್ವನಿ ಸೇರಿಸುವುದು ಕರ್ತವ್ಯ, ಆ ಕೆಲಸ ಮಾಡುತ್ತೇವೆಯೇ ಹೊರತು ಇದು ಯಾರ ಜೊತೆಯೋ ಹೊಂದಾಣಿಕೆಗೋ ಇನ್ನೊಂದಕ್ಕೋ ಅಲ್ಲ, ಸರ್ಕಾರವನ್ನು ಸರಿದಾರಿಗೆ ತರುತ್ತಿರುವ ಕೆಲಸ ಮಾಡುತ್ತಿದ್ದೇವೆ ಅಷ್ಟೇ ಎಂದು ಬಿಎಸ್ವೈ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ: BJP protest: 'ಗ್ಯಾರಂಟಿ ಯೋಜನೆ ನೀಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ'.. ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ