ಬೆಂಗಳೂರು: ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಪುನೀತ ಪರ್ವ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಅ.28ರಂದು ದಿ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ಗಂಧದ ಗುಡಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಪುನೀತ ಪರ್ವ ಕಾರ್ಯಕ್ರಮ ನಾಳೆ ಸಂಜೆ 6 ಗಂಟೆಗೆ ಅರಮನೆ ಮೈದಾನದ ಕೃಷ್ಣವಿಹಾರದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪುನೀತ್ ಅಭಿಮಾನಿಗಳು ಆಗಮಿಸಲಿದ್ದು, ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಶ್ರೀನಿವಾಸಗೌಡ, ಭದ್ರತೆಯ ದೃಷ್ಟಿಯಿಂದ 3 ಮಂದಿ ಡಿಸಿಪಿ, 14 ಎಸಿಪಿ , 60 ಇನ್ಸ್ಸ್ಪೆಕ್ಟರ್, 180 ಪಿಎಸ್ಐ ಹಾಗೂ 1400 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ 20 ಕೆಎಸ್ಆರ್ ಪಿ ತುಕಡಿ ಇರಲಿದೆ. ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ಪಾಸ್ ನೀಡುವಂತೆ ಆಯೋಜಕರಿಗೆ ಹೇಳಿದ್ದು, ಪಾಸ್ ವಿತರಿಸುವುದಾಗಿ ತಿಳಿಸಿದ್ದಾರೆ.
ನಾಳಿನ ಕಾರ್ಯಕ್ರಮಕ್ಕೆ 40 ಸಾವಿರಕ್ಕಿಂತ ಹೆಚ್ಚಿನ ಜನರು ಬರುವ ಸಾಧ್ಯತೆಯಿದೆ. ಅದರಂತೆ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಸಮಾರಂಭಕ್ಕೆ ಸುಮಾರು 500 ವಿವಿಐಪಿಗಳು ಬರಲಿದ್ದಾರೆ. ಅವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಸೇರಿ ಯಾರೇ ಆಗಿರಲಿ ಪಾಸ್ ಇದ್ದವರಿಗೆ ಮಾತ್ರ ಒಳಬಿಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ : ನಾಳೆ ಪುನೀತ್ ಪರ್ವ ಕಾರ್ಯಕ್ರಮ: ಮೋಹಕ ತಾರೆ ರಮ್ಯಾರಿಂದ ಡ್ಯಾನ್ಸ್ ಫರ್ಫಾಮೆನ್ಸ್