ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘಟನೆಗಳು ಇಂದು ಬಾರುಕೋಲು ಚಳವಳಿ ನಡೆಸಲಿವೆ. ಕೆಲವೇ ಕ್ಷಣಗಳಲ್ಲಿ ಚಳವಳಿ ಶುರುವಾಗಲಿದ್ದು, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬಾರುಕೋಲು ಹಿಡಿದು ಪಾದಯಾತ್ರೆ ಮೂಲಕ ರೈತರು ವಿಧಾನ ಸೌಧ ತಲುಪಲಿದ್ದಾರೆ.
ರೈತರು ನಡೆಸುತ್ತಿರುವ ವಿಭಿನ್ನ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ ಸಾಥ್ ನೀಡಿದೆ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಪ್ರತಿಭಟನಾ ರ್ಯಾಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಗಳದಿಂದ ಶುರುವಾಗಲಿದೆ. ಮೊದಲಿಗೆ ಕಾರ್ಪೊರೇಷನ್ ಬಳಿಯಿರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮವಿದೆ.
ಬಳಿಕ ಕಾರ್ಪೊರೇಷನ್ ಸರ್ಕಲ್ನಿಂದ ಜಾಥಾ ಆರಂಭಿಸಿ, ಮೈಸೂರು ಬ್ಯಾಂಕ್ ತಲುಪುವ ಕರವೇ ಕಾರ್ಯಕರ್ತರು ಅಲ್ಲಿಯೂ ಪ್ರತಿಭಟನೆ ನಡೆಸಲಿದ್ದಾರೆ. ನಂತರ ರಾಜ್ಯಪಾಲರ ಭೇಟಿಗೆ ನಿಯೋಗ ಹೋಗಲು ಅವಕಾಶ ಕೋರಲಾಗಿದೆ. ಈ ನಿಯೋಗದ ಭೇಟಿಗೆ ಅವಕಾಶ ನೀಡದಿದ್ದರೆ ರಾಜಭವನಕ್ಕೆ ಮುತ್ತಿಗೆ ಹಾಕಲು ಕರವೇ ಸಿದ್ಧತೆ ಮಾಡಿಕೊಂಡಿದೆ.
ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿಯೇ ಹೋರಾಟವನ್ನು ಹತ್ತಿಕ್ಕುವ ಸಕಲ ಸಿದ್ಧತೆಗಳನ್ನು ಪೊಲೀಸ್ ಇಲಾಖೆ ಮಾಡಿಕೊಂಡಿದೆ.