ಬೆಂಗಳೂರು: ಕೊರೊನಾ ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ನಗರದಲ್ಲಿ ಜನರು ಹಾಗೂ ವಾಹನ ಸವಾರರ ಓಡಾಟ ಶುರುವಾಗಿದೆ. ಸಿಲಿಕಾನ್ ಸಿಟಿಯ ಭದ್ರತೆ ದೃಷ್ಟಿಯಿಂದ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಇಂದು ಹಿರಿಯ ಪೊಲೀಸ್ ಅಧಿಕಾರಿಗಳನ್ನ ಒಳಗೊಂಡ ತಂಡದ ಜೊತೆ ಸಭೆ ನಡೆಸಿದ್ದಾರೆ.
ಜನರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ 144 ಸೆಕ್ಷನ್ ಇದೇ 31ರವರೆಗೆ ಮುಂದುವರಿಕೆ ಮಾಡುವಂತೆ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ. ಇನ್ನು ಸಭೆಯಲ್ಲಿ ನಗರದಲ್ಲಿ ಇನ್ನು ಮುಂದೆ ಪೊಲೀಸರು ಸಾರ್ವಜನಿಕರ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಜವಾಬ್ದಾರಿಗಳು ಏನು? ವಾಹನ ಸವಾರರು ಹಾಗೂ ಜನರ ಓಡಾಟದ ಬಗ್ಗೆ ಯಾವ ರೀತಿ ಪೊಲೀಸರು ಜಾಗೃತಿ ವಹಿಸಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗಿದೆ.
144 ಸೆಕ್ಷನ್ ಇರುವ ಕಾರಣ ಗುಂಪು ಸೇರದಂತೆ ಸಿಬ್ಬಂದಿ ಯಾವ ರೀತಿ ಕ್ರಮ ಕೈಗೊಳ್ಳಬೇಕು, ಕಾರ್ಮಿಕರು, ಬಡವರು ಕಷ್ಟದಲ್ಲಿದ್ದಾಗ ಯಾವ ರೀತಿ ನೆರವಾಗಬೇಕು, ಸಿಬ್ಬಂದಿ ಕೆಲಸ ನಿರ್ವಹಿಸುವಾಗ ಎಷ್ಟು ಜಾಗೃತರಾಗಿರಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ. ಹಾಗೆಯೇ ಕೆಲವೊಂದು ವ್ಯಾಪಾರ ವಹಿವಾಟುಗಳನ್ನ ನಡೆಸಲು ಅನುಮತಿ ನೀಡಿದ್ದು, ಶೈಕ್ಷಣಿಕ ತರಬೇತಿ ಕೋಚಿಂಗ್ ಸಂಸ್ಥೆಗಳನ್ನೆಲ್ಲಾ ಮುಚ್ಚಿಸಲಾಗಿದೆ. ಹೀಗಾಗಿ ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದಾರೆ. ನಗರದ ಏಳು ವಿಭಾಗದ ಡಿಸಿಪಿಗಳ ವ್ಯಾಪ್ತಿಯಲ್ಲಿ ಬರುವ ಠಾಣೆಗಳ ಸಿಬ್ಬಂದಿ ಈ ಕ್ರಮವನ್ನು ಅನುಸರಿಸಬೇಕಾಗಿದೆ.