ಬೆಂಗಳೂರು: ಅಧಿಕ ಬಡ್ಡಿ ವಿಧಿಸುವವರ ವಿರುದ್ಧ ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಳ್ಳುವುದಕ್ಕೆ ಪೊಲೀಸ್ ಅಧಿಕಾರಿಗಳಿಗೆ ಯಾವುದೇ ಅಧಿಕಾರವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಗೋಕಾಕ್ ನಗರ ಪೊಲೀಸ್ ಠಾಣಾಧಿಕಾರಿಗಳ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಆರೋಪ ಪಟ್ಟಿ ಸಲ್ಲಿಸಿದ್ದ ಕ್ರಮ ಪ್ರಶ್ನಿಸಿ ಗೋಕಾಕ್‌ನ ಬಸವರಾಜ ಮತ್ತು ಜಾಕೀರ್ ಹುಸೈನ್ ಎಂಬುವರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡ್ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ಪುರಸ್ಕರಿಸಿದ್ದು, ಆರೋಪ ಸಂಬಂಧ ದಾಖಲಾಗಿದ್ದ ಎಫ್‌ಐಆರ್ ಮತ್ತು ಆರೋಪ ಪಟ್ಟಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಕರ್ನಾಟಕ ಲೇವಾದೇವಿ ಕಾಯ್ದೆಯಲ್ಲಿ ತಿಳಿಸಿರುವಂತೆ ನೋಂದಣಾಧಿಕಾರಿಗಳು, ಉಪ ನೋಂದಣಾಧಿಕಾರಿಗಳು ಹಾಗು ಸರ್ಕಾರ ನಿಯೋಜಿಸಿದ ಅಧಿಕಾರಿಗಳು ಮಾತ್ರ ಅಧಿಕ ಬಡ್ಡಿ ವ್ಯವಾಹರ ನಡೆಸುವವರ ವಿರುದ್ಧ ದಾಳಿ ಮಾಡಬಹುದು ಎಂದು ತಿಳಿಸಿದೆ.
ಈ ರೀತಿಯ ಪ್ರಕರಣಗಳಲ್ಲಿನ ಸಂತ್ರಸ್ತರು ತಮ್ಮ ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರಾದ ಬಸವರಾಜು ಮತ್ತು ಜಾಕೀರ್ ಹುಸೈನ್ ಎಂಬುವರ ವಿರುದ್ಧ ದಾಳಿ ನಡೆಸಿದ್ದ ಪೊಲೀಸರು, ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ದಾಳಿ ನಡೆಸಿದ ಬಳಿಕ ಎಫ್‌ಐಆರ್ ದಾಖಲಿಸಿ, ಪರವಾನಿಗೆ ಇಲ್ಲದಿದ್ದರೂ ಸಾರ್ವಜನಿಕರ ವಾಹನಗಳನ್ನಿಟ್ಟುಕೊಂಡು ಮಾಸಿಕ ಶೇ 10ರಷ್ಟು ಬಡ್ಡಿ ವಿಧಿಸಲಾಗುತ್ತಿದೆ ಎಂದು ಆರೋಪಿಸಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಈ ಸಂಬಂಧ ಗೋಕಾಕ್‌ನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.
ಪ್ರಕರಣ ಮತ್ತು ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದು ಪಡಿಸುವಂತೆ ಕೋರಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ದುಬಾರಿ ಬಡ್ಡಿ ನಿಷೇಧ ಕಾಯ್ದೆ ಸೆಕ್ಷನ್ 3 ಮತ್ತು 4ಕ್ಕೆ ಕರ್ನಾಟಕ ಲೇವಾದೇವಿ ಕಾಯ್ದೆ (ಮನಿಲ್ಯಾಂಡರರ್ ಕಾಯ್ದೆ) ಅನ್ವಯವಾಗಲಿದೆ ಎಂದು ಕಾನೂನಿನಲ್ಲಿ ತಿಳಿಸಲಾಗಿದೆ.
ಅದರಂತೆ ಕರ್ನಾಟಕ ಲೇವಾದೇವಿ ಕಾಯ್ದೆ (ಮನಿಲ್ಯಾಂಡರರ್ ಕಾಯ್ದೆ) ಪ್ರಕಾರ ನೋಂದಣಾಧಿಕಾರಿಗಳು, ಉಪನೋಂದಣಾಧಿಕಾರಿಗಳು ಇಲ್ಲವೇ ಸರ್ಕಾರ ಅಧಿಕೃತವಾಗಿ ನೇಮಕ ಮಾಡಿರುವ ಅಧಿಕಾರಿ ಮಾತ್ರ ದುಬಾರಿ ಬಡ್ಡಿ ಕಾಯ್ದೆಯಡಿ ದಾಳಿ ನಡೆಸಬಹುದು ಎಂದು ತಿಳಿಸಿದೆ. ಹೀಗಾಗಿ ಪೊಲೀಸರು ದಾಳಿ ನಡೆಸಿರುವುದು ಕಾನೂನು ಬಾಹಿರವಾಗಿದೆ.
ಈ ಪ್ರಕರಣದಲ್ಲಿ ದಾಳಿ ನಡೆಸಿದ ಬಳಿಕ ಎಫ್‌ಐಆರ್ ದಾಖಲಿಸಲಾಗಿದೆ. ಇದು ಲಲಿತಾ ಕುಮಾರಿ ವಿರುದ್ಧದ ಉತ್ತರ ಪ್ರದೇಶದ ಪ್ರಕರಣದಲ್ಲಿ ಸುಪ್ರೀಂಕೊರ್ಟ್ ನೀಡಿರುವ ತೀರ್ಪಿಗೆ ವಿರುದ್ಧವಾಗಿದೆ. ಆದ್ದರಿಂದ ಪ್ರಕರಣ ರದ್ದು ಪಡಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರದ ಪರ ವಕೀಲರು, ಪ್ರಕರಣದ ಆರೋಪಿಗಳು ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೇ ಮಾಸಿಕ 10 ರಷ್ಟು ಬಡ್ಡಿ ಪಡೆಯುತ್ತಿರುವುದು ತನಿಖೆಯಲ್ಲಿ ಸ್ಪಷ್ಟವಾಗಿದೆ.
ಇದು ಕಾನೂನು ಬಾಹಿರವಾಗಿದ್ದು, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪ ಪಟ್ಟಿಯನು ಪರಿಶೀಲಿಸಿದ ಬಳಿಕ ಸೂಕ್ರ ಕ್ರಮ ಕೈಗೊಳ್ಳಲಿದೆ. ಈ ಸಂದರ್ಭದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಬಾರದು ಎಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿಯನ್ನು ಪುರಸ್ಕರಿಸಿದ್ದು, ಪ್ರಕರಣ ರದ್ದು ಪಡಿಸಿ ಆದೇಶಿಸಿದೆ.
ಇದನ್ನೂ ಓದಿ: ಶಿಯೋಮಿ ಕಂಪೆನಿಯ 3700 ಕೋಟಿ ರೂ. ವಶಕ್ಕೆ ಪಡೆಯುವ ಆದೇಶ ರದ್ದು ಪಡಿಸಿದ ಹೈಕೋರ್ಟ್