ಬೆಂಗಳೂರು: ಹೆಸರಿನ ಗೊಂದಲದಿಂದ ಪೊಲೀಸರು ತಪ್ಪಾದ ವ್ಯಕ್ತಿಯೋರ್ವನನ್ನು ಬಂಧಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ತಪ್ಪಾಗಿ ಬಂಧಿಸಲ್ಪಟ್ಟ ವ್ಯಕ್ತಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ವ್ಯಕ್ತಿಯ ಗುರುತನ್ನು ಸರಿಯಾಗಿ ದೃಢಪಡಿಸಿಕೊಳ್ಳದೆ ಅಮಾಯಕನ್ನು ಬಂಧಿಸಿರುವುದರಿಂದ ಆತನಿಗೆ ಪರಿಹಾರ ನೀಡಬೇಕೆಂದು ಹೈಕೋರ್ಟ್ ಸೂಚಿಸಿದೆ. ವಾರಂಟ್ನಲ್ಲಿ ಹೆಸರಿಸಲಾದ ವ್ಯಕ್ತಿಯ ತಂದೆಯ ಹೆಸರು ಅರ್ಜಿದಾರನ ತಂದೆಯ ಹೆಸರನ್ನು ಹೋಲುತ್ತದೆ ಎಂಬ ಒಂದೇ ಕಾರಣಕ್ಕೆ ಬಂಧನ ಸರಿಯಲ್ಲ. ಈ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ ಎಂದು ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಕಾಳಿದಾಸ ಲೇಔಟ್‌ನ ಎನ್.ನಿಂಗರಾಜು (56) ಎಂಬಾತನಿಗೆ 5 ಲಕ್ಷ ರೂ. ಪರಿಹಾರವನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದು, ಆತನನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳಿಂದ ಅದನ್ನು ವಸೂಲಿ ಮಾಡಲು ಸರ್ಕಾರಕ್ಕೆ ಸ್ವಾತಂತ್ರ್ಯವಿದೆ ಎಂದು ಹೇಳಿದೆ.
ಆರೋಪಿ ಯಾರೋ, ಬಂಧಿಸಿದ್ದು ಇನ್ನ್ಯಾರನ್ನೋ!: ಬಂಧಿತನು ವಾರಂಟ್ನಲ್ಲಿ ಹೆಸರಿಸಲಾದ ವ್ಯಕ್ತಿ ತಾನಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಬಂಧಿಸಲು ಹೋದ ಅಧಿಕಾರಿ ಅದನ್ನು ಪರಿಗಣಿಸಿಲ್ಲ. ಅಷ್ಟೇ ಅಲ್ಲದೆ ಅದೇ ವ್ಯಕ್ತಿಯನ್ನು ಬಂಧಿಸಿ ಕರೆದುಕೊಂಡು ಬಂದಿದ್ದಾರೆ. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದರಿಂದ ಅವರ ಸ್ವಾತಂತ್ರ್ಯಕ್ಕೆ ಮಾತ್ರವಲ್ಲದೆ ಅವರ ಮಾನವೂ ಹಾನಿಯಾಗಿದೆ. ಇದು ಸಂವಿಧಾನದ 21ನೇ ವಿಧಿಯಡಿಯಲ್ಲಿ ಬರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತಾಗಿದೆ. ಬಂಧಿತನ ಹೆಸರು ಸಹ ಇದರಿಂದ ಹಾಳಾಗಿದೆ ಎಂದು ನ್ಯಾಯಾಲಯ ಚಾಟಿ ಬೀಸಿದೆ.
ತಪ್ಪು ಗ್ರಹಿಕೆಯಿಂದ ಬಂಧಿತನಾದ ವ್ಯಕ್ತಿಗೆ ರಾಜ್ಯ ಸರ್ಕಾರವು ಪರಿಹಾರ ನೀಡುವ ಹೊಣೆಗಾರಿಕೆಯನ್ನು ಹೊಂದಿದೆ. ಹೀಗಾಗಿ ಬಂಧಿತ ವ್ಯಕ್ತಿಗೆ ಸರ್ಕಾರವು 5 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಅದನ್ನು ಇಂದಿನಿಂದ ಎಂಟು ವಾರಗಳೊಳಗಾಗಿ ವ್ಯಕ್ತಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳಿಂದಲೇ ವಸೂಲು ಮಾಡುವಂತೆ ಸರ್ಕಾರಕ್ಕೆ ಕೋರ್ಟ್ ಹೇಳಿದೆ.
ಪೊಲೀಸರಿಗೆ ಸೂಚನೆ: ಅಫೀಶಿಯಲ್ ಲಿಕ್ವಿಡೇಟರ್ ಆಫ್ ಇಂಡಿಯಾ ಹಾಲಿಡೇ (ಪ್ರೈವೇಟ್) ಲಿಮಿಟೆಡ್ (ಇನ್ ಲಿಕ್ವಿಡೇಶನ್) ಗೆ ಸಂಬಂಧಿಸಿದ ಪ್ರಕರಣದಲ್ಲಿ ನಿಂಗರಾಜು ಸಲ್ಲಿಸಿದ್ದ ಕಂಪನಿಯ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್, ಬಂಧನ ಕ್ರಮಗಳ ಬಗ್ಗೆ ಮಾರ್ಗಸೂಚಿಗಳು/ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಎಸ್‌ಒಪಿ ಹೊರಡಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಕಾರವಾರ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ