ಬೆಂಗಳೂರು : ಆಂಧ್ರದಿಂದ ಬೆಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಅಂತರಾಜ್ಯ ಕಳ್ಳನನ್ನು ಸಿಸಿಬಿ ಬಂಧಿಸಿದ್ದು, ಸುಮಾರು 30 ಲಕ್ಷ ರೂ ಮೌಲ್ಯದ ಗಾಂಜಾ ಹಾಗೂ ಒಂದು ಕಾರನ್ನು ಜಪ್ತಿ ಮಾಡಿಕೊಂಡಿದೆ.
ತಮಿಳುನಾಡು ಮೂಲದ ಸೌಂದರ್ ಬಂಧಿತ ಆರೋಪಿ. ಈತ ಅಕ್ರಮವಾಗಿ ಬೆಂಗಳೂರಿಗೆ 61 ಕೆ.ಜಿ.ಗಾಂಜಾವನ್ನು ತರುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ. ಈ ಹಿಂದೆ ಈತ ತಮಿಳುನಾಡಿನ ಮಧುರೈನಲ್ಲಿ 106 ಕೆ.ಜಿ. ಗಾಂಜಾ ಸರಬರಾಜು ಮಾಡುವಾಗ ಅಲ್ಲಿನ ಪೊಲೀಸರಿಗೆ ಸಿಕ್ಕಿ ಬಿದಿದ್ದನು.
ಡ್ರಗ್ಸ್ ಸಪ್ಲೈ ಪ್ರಕರಣವೊಂದರಲ್ಲಿ ಬೆಂಗಳೂರು ಮೂಲದ ಆರೋಪಿ ರೈಸ್ ರಜಾಕ್ ಜೈಲಿನಲ್ಲಿದ್ದಾಗ ಸೌಂದರ್ನ ಪರಿಚಯವಾಗಿದೆ. ಇಬ್ಬರು ಬಿಡುಗಡೆಯಾದ ಬಳಿಕ ಹಳೇ ವೃತ್ತಿಯನ್ನೇ ಮುಂದುವರೆಸಿದ್ದು, ಆಂಧ್ರದ ರಾಜಮಂಡ್ರಿಯಿಂದ ನಗರಕ್ಕೆ 30 ಲಕ್ಷ ರೂ.ಮೌಲ್ಯದ 61 ಕೆ.ಜಿ ಗಾಂಜಾವನ್ನು ಸಾಗಿಸುತ್ತಿದ್ದ ವೇಳೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.