ಬೆಂಗಳೂರು: ಇಂದಿನಿಂದ ಬಜೆಟ್ ಅಧಿವೇಶನ ನಡೆಯುತ್ತಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಂದ ರೈತ ಮಹಿಳೆಯರು ಹಾಗೂ ಪುರುಷರನ್ನು ಉತ್ತರ ವಿಭಾಗದ ಪೊಲೀಸರು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಸುಮಾರು 60 ರೈತರನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಅವರಲ್ಲಿ 48 ಜನ ಪುರುಷರು ಹಾಗೂ 12 ಜನ ಮಹಿಳೆಯರಿದ್ದಾರೆ. ಇವರೆಲ್ಲರನ್ನೂ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಇನ್ನು ರೈತರು ಬೀದರ್ ಮೂಲದವರಾರಾಗಿದ್ದು, ತಮ್ಮ ಜಮೀನು ಮುಳುಗಡೆಯಾಗಿ ಬೀದಿಗೆ ಬಿದ್ದ ಕಾರಣ ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ನಿಟ್ಟಿನಲ್ಲಿ ಬಂದಿದ್ದರು. ವಿಷಯ ತಿಳಿದು ಮುಂಜಾಗ್ರತಾ ಕ್ರಮವಾಗಿ ರೈತರನ್ನು ಪೊಲೀಸರು ವಶಕ್ಕೆ ಪಡೆದು ತಿಂಡಿ ಮತ್ತು ಮೂಲ ಸೌಕರ್ಯ ಕಲ್ಪಿಸಿದ್ದಾರೆ.
ಬಜೆಟ್ ಅಧಿವೇಶನ: ವಿಧಾನಸೌಧ ಸುತ್ತ ಖಾಕಿ ಕಣ್ಗಾವಲು: ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ವಿಧಾನಸೌಧ, ವಿಕಾಸಸೌಧ, ರಾಜಭವನ ಸೇರಿದಂತೆ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೌರತ್ವ ಕಾಯ್ದೆ ಸಂಬಂಧ ಕೆಲ ಅಹಿತಕರ ಘಟನೆಗಳು ನಡೆದಿದ್ದು, ಮತ್ತೊಂದೆಡೆ ಟೌನ್ಹಾಲ್ ಬಳಿ ಪ್ರತಿಭಟನೆಗೆ ಅವಕಾಶ ನೀಡದ ಹಿನ್ನೆಲೆ ಕೆಲ ಸಂಘಟನೆಗಳು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಮತ್ತು ಪೊಲೀಸ್ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ಮೇರೆಗೆ ನಗರದ ಕೇಂದ್ರ ವಿಭಾಗದ ಡಿಸಿಪಿ ಸೇರಿದಂತೆ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಕಾನ್ಸ್ಟೇಬಲ್ಗಳನ್ನು ನಿಯೋಜಿಸಲಾಗಿದೆ.