ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಒಬ್ಬ ಬೊಗಳೇ ದಾಸಯ್ಯ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಕಿಡಿಕಾರಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸವರ್ಷದ ಮಾರನೇ ದಿನ ಪ್ರಧಾನಿ ತುಮಕೂರು ಜಿಲ್ಲೆಗೆ ಭೇಟಿ ಕೊಡುತ್ತಿದ್ದಾರೆ. ಈಗಾಗಲೇ ನಾಲ್ಕು ಸಾರಿ ಭೇಟಿ ಕೊಟ್ಟು ಸಾಕಷ್ಟು ಭರವಸೆ ನೀಡಿ ತೆರಳಿದ್ದಾರೆ. ಇದೀಗ ಇನ್ನಾವ ಭರವಸೆ ಕೊಡುತ್ತಾರೋ?. ತುಮಕೂರಿಗೆ ಜ.2ಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅವರು ಹಿಂದೆ ನೀಡಿದ ಭರವಸೆಗಳ ಸಾಕಾರದ ವರದಿ ಸಲ್ಲಿಸಬೇಕಾಗುತ್ತದೆ, ಆ ಬೊಗಳೆ ದಾಸಯ್ಯ ಮಿಸ್ಟರ್ ಮೋದಿ ಎಂದು ಕಿಡಿಕಾರಿದರು.
ಈ ದೇಶದಲ್ಲಿ ಬೊಗಳ ದಾಸಯ್ಯ ಅಂತಿದ್ದರೆ ಅದು ಮಿಸ್ಟರ್ ಮೋದಿ. ಈಗಾಗಲೇ ತುಮಕೂರಿಗೆ ಸ್ಮಾರ್ಟ್ ಸಿಟಿ, ಫುಡ್ ಪಾರ್ಕ್, ನದಿ ಜೋಡಣೆ, ಇಸ್ರೋ ಕೇಂದ್ರದ ಭರವಸೆಯನ್ನ ಮೋದಿ ನೀಡಿದ್ರು. ಆದರೆ, ಇವುಗಳಲ್ಲಿ ಯಾವೊಂದು ಭರವಸೆಯನ್ನೂ ಮೋದಿ ಈಡೇರಿಸಿಲ್ಲ. ನಾಡಿದ್ದು ಬಂದಾಗ ಹಿಂದೆ ನೀಡಿದ್ದ ಭರವಸೆಗಳಿಗೆ ಸ್ಪಷ್ಟೀಕರಣ ಕೊಡಿ ಎಂದು ಆಗ್ರಹಿಸಿದರು.
ರೈತರ ಆತ್ಮಹತ್ಯೆ ನಿಲ್ಲಿಸೋಕೆ ಯಾವ ಕ್ರಮ ತೆಗೆದುಕೊಂಡಿದ್ದಾರೆ?. ಪ್ರವಾಹ ಪರಿಹಾರಕ್ಕೆ ಬಿಡುಗಡೆ ಮಾಡಿದ ಹಣವೆಷ್ಟು?. ರೈತರನ್ನ ದಾರಿತಪ್ಪಿಸುವ ಹೇಳಿಕೆ ನೀಡ್ತಿದ್ದಾರೆ ಮೋದಿ.
ಜೊತೆಗೆ ಸಂಸತ್ ನಲ್ಲೂ ಪದೇಪದೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ನಾವೇ ಪ್ರಸ್ತಾಪಿಸುತ್ತಿದ್ದೇವೆ. ಹೀಗಿದ್ದರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಮಾಜಿ ಸಂಸದ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.