ಬೆಂಗಳೂರು : ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ ಪಿಸಿಬಿ) ಅಧ್ಯಕ್ಷರಾಗಿ ಶಾಂತ ಅವ್ವರೇಹಳ್ಳಿ ತಿಮ್ಮಯ್ಯರನ್ನು ನೇಮಕ ಮಾಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ಬಸವನಗುಡಿಯ ಪುಷ್ಪ ಎ. ಗವಡಿ ಎಂಬುವರು ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ರಾಜ್ಯ ಸರ್ಕಾರ, ಕೆಎಸ್ಪಿಸಿಬಿ ಹಾಗೂ ನೂತನ ಅಧ್ಯಕ್ಷರಾದ ಶಾಂತ ತಿಮ್ಮಯ್ಯ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿತು.
ಇದಕ್ಕೂ ಮುನ್ನ ವಾದ ಮಂಡಿಸಿದ ವಕೀಲ ಶ್ರೀರಾಮರೆಡ್ಡಿ, ನೂತನ ಅಧ್ಯಕ್ಷರು ಮಾಲಿನ್ಯ ಉಂಟು ಮಾಡುವ ಹಲವು ಕಂಪನಿಗಳ ಸಲಹೆಗಾರರಾಗಿ ಇದ್ದವರು. ಅಷ್ಟೇ ಅಲ್ಲ, ಅವರೇ ಕೆಲವು ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಕೆಎಸ್ಪಿಸಿಬಿಗೆ ಅಧ್ಯಕ್ಷರಾಗಿ ನೇಮಕವಾಗುವ ಎರಡು ತಿಂಗಳ ಹಿಂದಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಅವರು ಕೆಎಸ್ಪಿಸಿಬಿ ಅಧ್ಯಕ್ಷರಾಗಿರುವುದು ಸರಿಯಲ್ಲ. ಅವರ ನೇಮಕ ಕಾನೂನು ಬಾಹಿರವಾಗಿದೆ ಎಂದರು.
ಅಲ್ಲದೆ, ಜಲ ಕಾಯ್ದೆ ಸೆಕ್ಷನ್ 6ರ ಪ್ರಕಾರ ಮಾಲಿನ್ಯ ಮಂಡಳಿ ಅಧ್ಯಕ್ಷರಾಗುವವರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮಂಡಳಿಯೊಂದಿಗೆ ಸಂಬಂಧ ಹೊಂದಿರಬಾರದು. ಸುಪ್ರೀಂಕೋರ್ಟ್ ಕೂಡ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗುವವರಿಗೂ ಮಾಲಿನ್ಯ ಉಂಟು ಮಾಡುವ ಕಂಪನಿಗಳಿಗೂ ಸಂಬಂಧವಿರಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಇದೀಗ ಸರ್ಕಾರವೇ ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿ ತಿಮ್ಮಯ್ಯ ಅವರನ್ನು ನೇಮಕ ಮಾಡಲಾಗಿದೆ ಎಂದು ವಿವರಿಸಿದರು.
ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿದರು.