ಬೆಂಗಳೂರು: ಪರಿಸರ ನಿಸರ್ಗ ಸಂರಕ್ಷಣಾ ಸಂಸ್ಥೆ ಸಹಭಾಗಿತ್ವದಲ್ಲಿ ಸಿಕೆಪಿ ವತಿಯಿಂದ 'ಭೂಸಿರಿ' ಪೇಯ ಇಂದು ಚಿತ್ರಕಲಾ ಪರಿಷತ್ನಲ್ಲಿ ಲೋಕಾರ್ಪಣೆ ಮಾಡಲಾಯಿತು.
ಸಿಕೆಪಿ ಅಧ್ಯಕ್ಷ ಬಿ. ಎಲ್. ಶಂಕರ್ ಪೇಯವನ್ನು ಲೋಕಾರ್ಪಣೆ ಮಾಡಿ ಮಾಧ್ಯಮದೊಂದಿಗೆ ಈ ಬಗ್ಗೆ ವಿವರಣೆ ನೀಡಿದರು. ಈ ಪೇಯದ ಚಿಂತನೆ ಪೂರ್ಣಚಂದ್ರ ತೇಜಸ್ವಿ ಅವರ ಪ್ರೇರಣೆ ಫಲಿತಾಂಶವಾಗಿದೆ. ನವನಾಗರಿಕತೆ ಹೆಸರಿನಲ್ಲಿ ಎಲ್ಲ ಆಹಾರಗಳು ಹಾಗೂ ಪೇಯಗಳು ರಾಸಾಯನಿಕ ಅಂಶಗಳನ್ನು ಒಳಗೊಂಡಿರುತ್ತವೆ. ಇದರಿಂದ ದೇಹಕ್ಕೆ ಹಾನಿ ಉಂಟಾಗುತ್ತದೆ. ಒಂದೂವರೆ ವರ್ಷಗಳಿಂದ ಈ ಪೇಯದ ಸಂಶೋಧನೆ ನಡೆದಿದೆ. ನಂತರ ಇನ್ನೇನು ಇದು ಮಾರುಕಟ್ಟೆಗೆ ಬರಬೇಕು ಎನ್ನುವಷ್ಟರಲ್ಲಿ ಕೋವಿಡ್-19 ಹಾವಳಿ ಶುರುವಾಯಿತು. ಆಗ ಕೊರೊನಾ ವಾರಿಯರ್ಸ್ಗೆ ಇದನ್ನು 4 ತಿಂಗಳು ನೀಡಿ ನಂತರ ಸಿಎಫ್ಟಿಆರ್ಐಗೆ ಕಳಿಸಲಾಗಿತ್ತು. ಸದ್ಯ ಇದರ ಫಲಿತಾಂಶ ಬಂದಿದ್ದು, ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದರು.
16 ಬಗೆ ಧಾನ್ಯ, 9 ಬಗೆಯ ಮೊಳಕೆ ಕಾಳು, 11 ರೀತಿಯ ತರಕಾರಿ ಸೇರಿದಂತೆ 100ಕ್ಕೂ ಹೆಚ್ಚು ಪದಾರ್ಥಗಳನ್ನು ಬಳಸಿ ತಯಾರಿಸಬೇಕಾಗಿರುವ ಪೇಯವು ಪೌಷ್ಟಿಕಾಂಶ ವೃದ್ಧಿಸಲು ಸಹಕಾರಿಯಾಗುತ್ತದೆ. ಸದ್ಯಕ್ಕೆ ಇದರ ಬೆಲೆ 1,000 ರೂಪಾಯಿ ನಿಗದಿಪಡಿಸಲಾಗಿದೆ. ಇನ್ನು ದೊಡ್ಡ ಪ್ರಮಾಣದ ಬೇಡಿಕೆ ಬಂದರೆ ಬೆಲೆ ಇಳಿಯಲಿದೆ. ಇನ್ನೂ ಪೇಯ ಆನ್ಲೈನ್ನಲ್ಲಿ ಮಾತ್ರ ಸಿಗಲಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಈಗಾಗಲೇ 350 ಪೊಲೀಸ್ ಸಿಬ್ಬಂದಿ, 200 ವೈದ್ಯರು ಹಾಗೂ ಕೊರೊನಾ ರೋಗಿಗಳಿಗೆ ವಿತರಿಸಲಾಗಿದೆ. ಜೊತೆಗೆ ಕೊರೊನಾ ರೋಗಿಗಳೂ ಇದನ್ನ ನೀಡಲಾಗಿದೆ. ಈ ಪೇಯ ಸಕ್ಕರೆ ಕಾಯಿಲೆ ಇರುವವರು ಸ್ವೀಕರಿಸಬಹುದಾಗಿದೆ. ಎಲ್ಲ ಪದಾರ್ಥಗಳು ನೈಸರ್ಗಿಕ ಗಿಡ ಹಾಗೂ ಗೆಡ್ಡೆಯಿಂದ ತಯಾರಾಗುವ ಕಾರಣ ಸದ್ಯಕ್ಕೆ ಅಡ್ಡಪರಿಣಾಮ ಕಂಡುಬಂದಿಲ್ಲ ಎಂದು ಸಂಸ್ಥೆಯವರು ಹೇಳುತ್ತಾರೆ.
ಒಟ್ಟಾರೆ ಹೇಳುವುದಾದರೆ ಕಳೆದ 6 ತಿಂಗಳಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಾರುಕಟ್ಟೆಗೆ ಹಲವಾರು ಉತ್ಪನ್ನಗಳು ಬರುತ್ತಿದ್ದು, ಜನರಿಗೆ ಪೌಷ್ಟಿಕಾಂಶದ ಮಹತ್ವ ಕೊರೊನಾ ದೆಸೆಯಿಂದ ಮನದಟ್ಟಾಗುತ್ತಿದೆ.