ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಲಾರಿ ಮಾಲೀಕರು ತತ್ತರಿಸಿ ಹೋಗಿದ್ದು, ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಾಳೆ ದೇಶವ್ಯಾಪಿ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ರಾಷ್ಟ್ರೀಯ ಟ್ರೇಡರ್ಸ್ ಯೂನಿಯನ್ ವತಿಯಿಂದ ನಡೆಯುತ್ತಿರುವ ಲಾರಿ ಮುಷ್ಕರಕ್ಕೆ, ರಾಜ್ಯದಲ್ಲೂ ಬೆಂಬಲ ವ್ಯಕ್ತವಾಗಿದ್ದು, ನಾಳೆ ರಾಜ್ಯದಲ್ಲಿ ಲಾರಿಗಳು ರೋಡಿಗೆ ಇಳಿಯಲ್ಲ ಎಂದು ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟ್ ಫೆಡರೇಷನ್ ತಿಳಿಸಿದೆ.
ಕೇಂದ್ರ ಸರ್ಕಾರದ ಜಿ.ಎಸ್.ಟಿ, ವೇ ಬಿಲ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸುತ್ತಿದ್ದೇವೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಈಟಿವಿ ಭಾರತಕ್ಕೆ ತಿಳಿಸಿದರು.
ರಾಷ್ಟ್ರವ್ಯಾಪಿ ನಡೆಯುತ್ತಿರುವ ಮುಷ್ಕರಕ್ಕೆ ರಾಜ್ಯದ ಲಾರಿಗಳು ಸ್ತಬ್ಧವಾಗಲಿವೆ. ತಮ್ಮ ವಹಿವಾಟು ಸ್ಥಗಿತಗೊಳಿಸಿ ಬಂದ್ ಮಾಡಲು ಲಾರಿ ಮಾಲೀಕರು ನಿರ್ಧರಿಸಿದ್ದಾರೆ. ಸರ್ಕಾರ ಬೇಡಿಕೆಗಳನ್ನ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಚಿಂತನೆ ನಡೆದಿದೆ ಎಂದು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಮಾಹಿತಿ ನೀಡಿದರು.
ನಾಳೆ ಬೆಳಗ್ಗೆಯಿಂದ ಲಾರಿ ಸಂಚಾರ ಬಂದ್ ಮಾಡಲಾಗುತ್ತಿದೆ. ಲಾರಿ ಸಂಚಾರ ಸ್ಥಗಿತದಿಂದ ಅಗತ್ಯ ವಸ್ತುಗಳ ಪೂರೈಕೆ ವ್ಯತ್ಯಯವಾಗುವ ಸಾಧ್ಯತೆ ಇದೆ.