ಬೆಂಗಳೂರು: ಮದ್ಯ ಸೇವನೆ ಮಾಡಿ ಕಾರು ಚಲಾಯಿಸಿ ಇಬ್ಬರ ಪ್ರಾಣಕ್ಕೆ ಕಂಟಕನಾಗಿದ್ದ ಆರೋಪಿಗೆ ಆರೂವರೆ ವರ್ಷ ಸಾಧಾರಣ ಜೈಲು ಶಿಕ್ಷೆ ಹಾಗೂ 1.04 ಲಕ್ಷ ರೂ. ದಂಡ ವಿಧಿಸಿ ಬೆಂಗಳೂರು ಗ್ರಾಮಾಂತರ 7ನೇ ಜಿಲ್ಲಾ ಹೆಚ್ಚುವರಿ ಹಾಗೂ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
2013ರ ಮಾರ್ಚ್ 4ರಂದು ಭಾನುಕುಮಾರ್ ಎಂಬಾತ ಮದ್ಯ ಸೇವಿಸಿ ನೈಸ್ ರಸ್ತೆಯ ಎಲೆಕ್ಟ್ರಾನಿಕ್ ಸಿಟಿಯಿಂದ ಬನ್ನೇರುಘಟ್ಟ ರಸ್ತೆ ಮಾರ್ಗದಲ್ಲಿ ವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡು ನಡುರಸ್ತೆಯಲ್ಲಿ ಪಲ್ಟಿ ಹೊಡೆದು ಮಗುಚಿ ಬಿದ್ದಿತ್ತು. ದುರ್ಘಟನೆಯಲ್ಲಿ ಕಾರಿನಲ್ಲಿದ್ದ ವಿಶ್ವನಾಥ್, ಸಂತೋಷ್ ಸ್ಥಳದಲ್ಲೇ ಮೃತಪಟ್ಟರೆ, ನಿಖಿಲ್‌ಕುಮಾರ್ ಹಾಗೂ ಮಣಿಕಂಠ ಎಂಬುವರು ಗಾಯಗೊಂಡಿದ್ದರು. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಬೆಲ್ಲದ ಶೋ ರೂಂ ಮೇಲೆ ಗಂಭೀರ ಆರೋಪ: ಪಾಲಿಕೆ ಆಸ್ತಿ ಅತಿಕ್ರಮಣ ಹಿನ್ನೆಲೆ ಕೋರ್ಟ್ ಮೆಟ್ಟಿಲೇರಿದ ಪ್ರಕರಣ!
ತನಿಖಾಧಿಕಾರಿಯಾಗಿದ್ದ ಇನ್ಸ್ಪೆಕ್ಟರ್ ಬಿ.ಕೆ.ಶೇಖರ್ 2013ರಲ್ಲಿ ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪಿ ಮೇಲಿನ ಆರೋಪ ಸಾಬೀತಾಗಿದ್ದರಿಂದ ಕೋರ್ಟ್ ಆರೂವರೆ ವರ್ಷಗಳ ಸಾಧಾರಣ ಶಿಕ್ಷೆ ಹಾಗೂ 1.04 ಲಕ್ಷ ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿಯಾಗಿ 1 ತಿಂಗಳ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.