ಬೆಂಗಳೂರು: ನಗರದ ಪ್ರತಿಷ್ಠಿತ ಕರಗ ಆಚರಣೆಯ ಕುರಿತು ಇಂದು ಕರಗ ಉತ್ಸವ ಸಮಿತಿ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳ ಜೊತೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸಭೆ ನಡೆಸಿದರು.
ವಿಧಾನ ಪರಿಷತ್ ಸದಸ್ಯರಾದ ಪಿ.ಆರ್. ರಮೇಶ್, ಕರಗ ಉತ್ಸವವನ್ನು ದೇವಸ್ಥಾನದ ಸುತ್ತಮುತ್ತ, ಸಂಪಿಗೆ ಕರೆ ಹಾಗೂ ಪಾಲಿಕೆ ಆವರಣದಲ್ಲಿ ಆಚರಣೆಗೆ ಮನವಿ ಮಾಡಿದರು. ಆದ್ರೆ ಈಗಾಗಲೇ ಧರ್ಮರಾಯ ಟೆಂಪಲ್ ವಾರ್ಡ್ನಲ್ಲಿ ನೂರಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ದೃಢಪಟ್ಟಿರುವುದರಿಂದ ಸರಳ ಆಚರಣೆಗೆ ಒಪ್ಪುವಂತೆ ಮನವಿ ಮಾಡಲಾಗಿದೆ ಎಂದು ಗೌರವ್ ಗುಪ್ತಾ ತಿಳಿಸಿದರು. ಅಲ್ಲದೇ ಕರಗ ಉತ್ಸವವನ್ನು 50-100 ಜನರಲ್ಲಿ ಆಚರಣೆಗೆ ಅನುಮತಿ ಕೇಳಿದ್ದು, ಇದರ ಅಂತಿಮ ನಿರ್ಧಾರ ಇನ್ನೆರಡು ದಿನದಲ್ಲಿ ಜಿಲ್ಲಾಧಿಕಾರಿಗಳು ನಿರ್ಧಾರ ಮಾಡಲಿದ್ದಾರೆ ಎಂದರು.
ಈಗಿನ ಸಂಧರ್ಭದಲ್ಲಿ ದೇವಾಲಯದ ಸಮೀಪ ಕೂಡಾ ಹಲವಾರು ಕೋವಿಡ್ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಸೀಮಿತ ರೀತಿಯಲ್ಲಿ ಆಚರಣೆ ಮಾಡುವ ಬಗ್ಗೆ ಎಲ್ಲರಲ್ಲೂ ಒಮ್ಮತ ಇದೆ. ಯಾವ ರೀತಿ ಆಚರಣೆ ಮಾಡಬೇಕು ಎಂಬ ಬಗ್ಗೆ ಅಂತಿಮಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ಕಳೆದ ಬಾರಿಯೂ ಕರಗ ಉತ್ಸವ ಆಚರಣೆ ದೇವಾಲಯದ ಆವರಣದ ಒಳಗೆ ಆಚರಿಸಲಾಗಿತ್ತು. ಈ ಬಾರಿಯೂ ಅದೇ ರೀತಿ ನಡೆಸುವ ಬಗ್ಗೆ ಪೊಲೀಸ್ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸಮಿತಿಯಿಂದ ಅದ್ಧೂರಿಯಾಗಿ ಮಾಡಬೇಕೆಂಬ ಅಭಿಪ್ರಾಯ ಕೂಡಾ ವ್ಯಕ್ತವಾಗಿದೆ. ಆದರೆ ಮೆರವಣಿಗೆಗೆ ಅವಕಾಶ ಇಲ್ಲ. ಸಣ್ಣ ಪ್ರಮಾಣದಲ್ಲಿ ದೇವಸ್ಥಾನದ ಆವರಣದೊಳಗೆ ಆಚರಣೆಗೆ ಅವಕಾಶ ನೀಡಲಾಗುವುದು ಎಂದರು.
ಇದನ್ನೂ ಓದಿ: ಏಕಕಾಲದಲ್ಲಿ 70 ಸ್ವಾಮೀಜಿಗಳಿಂದ ಆಶೀರ್ವಾದ ಪಡೆದ ಸಿಎಂ ಯಡಿಯೂರಪ್ಪ
ಇನ್ನು ರಂಜಾನ್ ಆಚರಣೆಗೂ ಪ್ರತ್ಯೇಕ ಮಾರ್ಗಸೂಚಿ ಸರ್ಕಾರ ಹೊರಡಿಸಿದೆ. ಆ ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಸಿಯೇ ಆದೇಶ ಹೊರಡಿಸಲಾಗಿದೆ. ಪೊಲೀಸ್ ಇಲಾಖೆ ಇದರ ಅನುಷ್ಠಾನದ ಬಗ್ಗೆ ನೋಡಿಕೊಳ್ಳಲಿದೆ ಎಂದರು.