ಬೆಂಗಳೂರು: ದಿನೇ ದಿನೇ ಸಾಂಕ್ರಾಮಿಕ ಕೊರೊನಾ ಸೋಂಕಿಗೆ ತುತ್ತಾಗುತ್ತಿರುವ ಸಂಖ್ಯೆ ಏರಿಕೆ ಆಗುತ್ತಿದೆ. ಎರಡನೇ ಅಲೆಯಲ್ಲಿ ಸೋಂಕು ಹರಡುವಿಕೆ ರೀತಿ ನೋಡಿ ತಜ್ಞರೇ ಆತಂಕಕ್ಕೆ ಒಳಗಾಗಿದ್ದಾರೆ.
ಹೌದು, ಈ ಡೆಡ್ಲಿ ಕೊರೊನಾಗೆ ಹೆಚ್ಚು ಬಲಿಯಾಗ್ತಿರೋದು ಯಾರು.? ಮೊದಲ ಅಲೆ ಹಾಗೂ ಎರಡನೇ ಅಲೆಯ ಸಾವಿನಲ್ಲಿ ಪತ್ತೆಯಾಗ್ತಿರುವ ಅಂಶ ಏನು..? ಅನ್ನೋದನ್ನ ತಜ್ಞರು ಕಂಡುಕೊಂಡಿದ್ದಾರೆ. ಅಂಕಿ-ಅಂಶಗಳ ಪ್ರಕಾರ ರೋಗ ಲಕ್ಷಣ ಇರದೆ ಆರೋಗ್ಯವಾಗಿದ್ದವರೇ ಹೆಚ್ಚು ಕೋವಿಡ್ಗೆ ಬಲಿಯಾಗಿದ್ದಾರೆ.
ಹೌದು, ಮೊದಲ ಅಲೆಯಲ್ಲಿ ಇತರ ಆರೋಗ್ಯ ಸಮಸ್ಯೆ ಇದ್ದವರಲ್ಲಿ ಸಾವು ಹೆಚ್ಚಾಗಿತ್ತು. ಆದರೆ ಈ ಬಾರಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೇ ಇದ್ದರೂ ಸಾವು ಸಂಭವಿಸುತ್ತಿದೆ. ಕಳೆದ 5 ದಿನಗಳಲ್ಲಿ ರಾಜ್ಯಾದ್ಯಂತ 2,140 ಸೋಂಕಿತರು ಕೊರೊನಾಗೆ ಬಲಿ ಆಗಿದ್ದಾರೆ. ಇದರಲ್ಲಿ 790 ಸೋಂಕಿತರಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಸಹ ಅವರು ಸೋಂಕಿನಿಂದ ಮೃತಪಟ್ಟಿದ್ದಾರೆ. 1,350 ಸೋಂಕಿತರು ಆರೋಗ್ಯ ಸಮಸ್ಯೆ ಇದ್ದು ಮೃತಪಟ್ಟಿದ್ದಾರೆ. ಕಳೆದ 5 ದಿನದಲ್ಲಿ ಮೃತಪಟ್ಟವರ ಪೈಕಿ ಶೇ.32 ರಷ್ಟು ಸೋಂಕಿತರಿಗೆ ಯಾವುದೇ ಆರೋಗ್ಯದ ಸಮಸ್ಯೆ ಇರಲಿಲ್ಲ ಎಂದು ತಿಳಿದುಬಂದಿದೆ.
ಇದಕ್ಕೆ ಪ್ರಮುಖವಾಗಿ ಕೊರೊನಾ ಸೋಂಕಿನ ಬಗ್ಗೆ ಇರುವ ನಿರ್ಲಕ್ಷ್ಯ, ಕೊನೆ ಕ್ಷಣದಲ್ಲಿ ಆಸ್ಪತ್ರೆ ಬಾಗಿಲು ತಟ್ಟುತ್ತಿರುವುದೇ ಸೋಂಕಿತರ ಸಾವಿಗೆ ಕಾರಣವಾಗಿದೆ. ಹೀಗಾಗಿ ಆರೋಗ್ಯವಂತರು, ದೀರ್ಘಕಾಲದ ಅನಾರೋಗ್ಯ ಸಮಸ್ಯೆ ಇರುವವರು ಸಹ ಕೊರೊನಾ ಲಕ್ಷಣ ಕಂಡು ಬಂದರೆ ಕೂಡಲೇ ತಪಾಸಣೆಗೆ ಒಳಪಡಿ. ರೋಗ ಉಲ್ಬಣವಾಗುವ ಮೊದಲೇ ಆರೋಗ್ಯ ಕಾಪಾಡಿಕೊಳ್ಳಿ.
ಕೊರೊನಾ ಸಾವಿನ ಸವಾರಿ :
ದಿನಾಂಕ | ಲಕ್ಷಣ ಇದ್ದವರ ಸಾವಿನ ಸಂಖ್ಯೆ | ಲಕ್ಷಣ ಇಲ್ಲದವರು ಸಾವಿನ ಸಂಖ್ಯೆ |
ಮೇ 4 | 281 | 111 |
ಮೇ 5 | 210 | 136 |
ಮೇ 6 | 161 | 167 |
ಮೇ 7 | 384 | 208 |
ಮೇ 8 | 314 | 168 |