ಬೆಂಗಳೂರು : ರಾಜ್ಯದಲ್ಲಿರುವ ಭ್ರಷ್ಟ ಸರ್ಕಾರವನ್ನು ಬಡಿದೋಡಿಸಿ, ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಕರ್ನಾಟಕ ರಾಜ್ಯದ ಜನರ ಮುಂದೆ ಅವಕಾಶ ಎದುರಾಗಿದೆ ಎಂದು ರಾಜ್ಯಸಭಾ ಸದ್ಯಸ ರಾಜೀವ್ ಶುಕ್ಲಾ ತಿಳಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜೀವ್ ಶುಕ್ಲಾ, ಕಳೆದ ಬಾರಿ ಬಿಜೆಪಿ ನಮ್ಮ ಶಾಸಕರನ್ನು ಖರೀದಿ ಮಾಡಿ ಸರ್ಕಾರ ಬೀಳಿಸಿತ್ತು. ಹೀಗಾಗಿ ರಾಜ್ಯದ ಜನ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಎದ್ದಿದ್ದು, ಕಾಂಗ್ರೆಸ್ ಪ್ರಚಂಡ ಬಹುಮತ ಪಡೆಯುವ ವಿಶ್ವಾಸವಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದಿದ್ದು, ಹೀಗಾಗಿ ರಾಜ್ಯದ ಜನ ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟಿದ್ದಾರೆ. ನಾವು ಹಿಮಾಚಲ ಪ್ರದೇಶದಲ್ಲೂ ಸಾಕಷ್ಟು ಯೋಜನೆ ಘೋಷಣೆ ಮಾಡಿದ್ದು, ಅವುಗಳನ್ನು ಜಾರಿ ಮಾಡುತ್ತಿದ್ದೇವೆ. ಹಳೇ ಪಿಂಚಣಿ ವ್ಯವಸ್ಥೆ ಜಾರಿ, ಮಹಿಳೆಯರಿಗೆ 1500 ರೂ. ಉಚಿತ ವಿದ್ಯುತ್, ರೈತರಿಗೆ ಬೆಂಬಲ ಬೆಲೆ ಕುರಿತ ಭರವಸೆಯನ್ನು ಹಿಮಾಚಲ ಪ್ರದೇಶದಲ್ಲಿ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ರಾಜೀವ್ ಶುಕ್ಲಾ ತಿಳಿಸಿದರು.
ಮಧ್ಯಪ್ರದೇಶ, ಛತ್ತೀಸಗಡ, ರಾಜಸ್ಥಾನ ರಾಜ್ಯಗಳಲ್ಲೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊಟ್ಟ ಭರವಸೆಯನ್ನು ತಕ್ಷಣವೇ ಜಾರಿ ಮಾಡಿದೆ. ಬಿಜೆಪಿ ಯಾವ ಒಂದು ಯೋಜನೆ ಜಾರಿ ಮಾಡಿದೆ ಎಂದು ಉದಾಹರಣೆ ನೀಡಿ. ನರೇಗಾ, ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು ಯೋಜನೆ ನೀಡಿದೆ. ಬಿಜೆಪಿ ಸರ್ಕಾರ 2014ರಿಂದ ಯಾವುದೇ ಒಂದು ಜನಪರ ಯೋಜನೆ ನೀಡಿಲ್ಲ. ಬಿಜೆಪಿ ನಿಮ್ಮ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿತ್ತು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿದ ಬಿಜೆಪಿ 9 ವರ್ಷಗಳಲ್ಲಿ 18 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು. ಆದರೆ 18 ಲಕ್ಷ ಉದ್ಯೋಗ ನೀಡಿಲ್ಲ. ನಮ್ಮ ಸರ್ಕಾರ ಬಂದರೆ ಪೆಟ್ರೋಲ್ 50 ರೂ.ಗೆ, ಡೀಸೆಲ್ 40 ರೂ.ಗೆ ನೀಡುತ್ತೇವೆ. 2022ರ ವೇಳೆಗೆ ಪ್ರತಿಯೊಬ್ಬರಿಗೂ ಮನೆ ನಿರ್ಮಿಸುವುದಾಗಿ ಹೇಳಿದ್ದರು. ರೈತರಾ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು. ಹೀಗೆ ಪ್ರತಿ ಹಂತದಲ್ಲಿ ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ರಾಜೀವ್ ಶುಕ್ಲಾ ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಚುನಾವಣೆ ಸಮಯದಲ್ಲಿ ಈ ಬಗ್ಗೆ ಮಾತನಾಡುತ್ತಾರೆ. ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಮರೆಯುತ್ತಾರೆ. ನಿನ್ನೆ ಬಿಜೆಪಿ ಪ್ರಮುಖ ನಾಯಕರ ಮಾತು ಕೇಳುತ್ತಿದ್ದೆ. ನಿಮಗೆ ಮೋದಿ ಅವರ ಆಶೀರ್ವಾದ ಬೇಕು ಎಂದರೆ ಬಿಜೆಪಿಗೆ ಮತ ಹಾಕಿ ಎಂದು ಹೇಳುತ್ತಾರೆ. ಅವರೇನು ದೇವರೇ? ನಿಮ್ಮ ಬಳಿ ರಾಜ್ಯದ ಯಾವುದೇ ನಾಯಕರಿಲ್ಲವೇ? ಮೋದಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ಮಾಡುತ್ತಾರಾ? ಅವರು ರಾಜ್ಯದ ಯಾವುದೇ ನಾಯಕರ ಬಗ್ಗೆ ಮಾತನಾಡುತ್ತಿಲ್ಲ. ಮೋದಿ ಹೆಸರು ಹೇಳುತ್ತಾ ಬೆದರಿಕೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಕನ್ನಡಿಗರಿಗೆ ಮಾಡಬಹುದಾದ ಅಪಮಾನ. ಹೀಗಾಗಿ ಅವರು ಕ್ಷಮೆ ಕೇಳಬೇಕು ಎಂದು ರಾಜೀವ್ ಶುಕ್ಲಾ ಕಿಡಿಕಾರಿದರು.
ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಚುನಾವಣೆಯನ್ನು ಮೋದಿ ವರ್ಸಸ್ ಕಾಂಗ್ರೆಸ್ ಎಂಬಂತೆ ಪ್ರಚಾರ ಮಾಡಿತು. ನಂತರ ಮೋದಿ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಿದ ನಂತರ ಇದನ್ನು ನಿಲ್ಲಿಸಿದರು. ನಂತರ ಅವರ ಕೆಟ್ಟದಾಗಿ ಸೋತು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಅದೇ ರೀತಿ ರಾಜ್ಯದಲ್ಲೂ ಆಗಲಿದೆ ಎಂದು ರಾಜೀವ್ ಶುಕ್ಲಾ ಭವಿಷ್ಯ ನುಡಿದರು.
ಈ ಚುನಾವಣೆಯಲ್ಲಿ ಬಿಜೆಪಿ ಕುಟುಂಬದ 36 ಜನರಿಗೆ ಟಿಕೆಟ್ ನೀಡಿದ್ದಾರೆ. ಆದರೂ ಕಾಂಗ್ರೆಸ್ ವಿರುದ್ಧ ಪರಿವಾರವಾದದ ಬಗ್ಗೆ ಮಾತನಾಡುತ್ತಾರೆ. ಹಿಮಾಚಲ ಪ್ರದೇಶದಂತೆ ರಾಜ್ಯದಲ್ಲೂ ಬಿಜೆಪಿ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಬಿಜೆಪಿ ಸೋಲುವುದು ಖಚಿತವಾಗಿದೆ. ಇನ್ನು ರಾಜ್ಯದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಾದರೆ, ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ 1.50 ಲಕ್ಷ ಕೋಟಿ ಲೂಟಿ ಮಾಡಲಾಗಿದೆ. ಈ ಸರ್ಕಾರ ಟೆಂಡರ್ ಹಗರಣ, ಪಿಎಸ್ಐ ನೇಮಕಾತಿ, ಭೂ ಕಬಳಿಕೆ ಹಗರಣ, ಕೋವಿಡ್ ಹಗರಣ, ವಿಜೇಂದ್ರ ಹಗರಣ, ಮೊಟ್ಟೆ ಹಗರಣ, ಫಉಡ್ ಕಿಟ್ ಹಗರಣ, ಬಿಟ್ ಕಾಯಿನ್ ಹಗರಣ, ಸಿಡಿ ಹಗರಣ, ಬೆಡ್ ಹಗರಣ, ಬ್ಯಾಂಕ್ ಸಾಲ ಹಗರಣ, ರಾಘವೇಂದ್ರ ಬ್ಯಾಂಕ್ ಹಗರಣ, ಬಿಡಿಎ ಹಗರಣ ನಡೆಸಿದೆ ಎಂದು ರಾಜೀವ್ ಶುಕ್ಲಾ ಹೇಳಿದರು.
ಮತ್ತೊಂಡೆದೆ ಕಾಂಗ್ರೆಸ್ ಪಕ್ಷ ರಾಜ್ಯದ ಜನರಿಗೆ 4 ಗ್ಯಾರಂಟಿ ಯೋಜನೆ ನೀಡುತ್ತಿದ್ದು, ಪ್ರತಿ ವರ್ಷ ಇದಕ್ಕಾಗಿ 50 ಸಾವಿರ ಕೋಟಿ ಹಣ ನೀಡಲಿದೆ. ಬಿಜೆಪಿ ಸರ್ಕಾರ ಬಟ್ಟೆ ಬದಲಿಸುವಂತೆ ಮುಖ್ಯಮಂತ್ರಿಗಳನ್ನು ಬದಲಿಸುತ್ತಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸರ್ಕಾರವನ್ನು ನಡೆಸುವ ಕ್ರಮವಲ್ಲ. ಹೀಗಾಗಿ ರಾಜ್ಯದ ಜನ ಈ ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ ಎಂದು ರಾಜೀವ್ ಶುಕ್ಲಾ ತಿಳಿಸಿದರು.
ಇದನ್ನೂ ಓದಿ : ಅಮಿತ್ ಶಾ ಪ್ರಚೋದಾನಾತ್ಮಕ ಹೇಳಿಕೆ ನೀಡುವುದನ್ನು ನಿಲ್ಲಿಸಲಿ: ಮಲ್ಲಿಕಾರ್ಜುನ ಖರ್ಗೆ