ಆನೇಕಲ್: ಸುಮಾರು ನಾಲ್ಕು ತಿಂಗಳಿಂದ ಆನೇಕಲ್ ಪುರಸಭೆ ವ್ಯಾಪ್ತಿಯ ಚಂದಾಪುರದ ಕಸ ವಿಲೇವಾರಿಗೊಳಿಸದೇ ದುರ್ನಾತ ಬೀರುತ್ತಿದ್ದು, ಇದರಿಂದ ರೋಸಿ ಹೋದ ಸಾರ್ವಜನಿಕರು ಪುರಸಭೆ ಎದುರು ಕಸ ಸುರಿದು ಪ್ರತಿಭಟನೆ ನಡೆಸಿದರು.
ಕಸ ವಿಲೇವಾರಿ ವಿಳಂಬದಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಮಕ್ಕಳ, ವೃದ್ಧರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹಲವು ಬಾರಿ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು ಪುರಸಭೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರತಿಭಟನಾನಿರಂತರು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆಯ ಮುಂದೆ ನಡೆಯುವ ಸಂತೆಯ ಕಸವನ್ನು ತಪ್ಪದೇ ವಿಲೇವಾರಿ ಮಾಡಲಾಗುತ್ತಿದೆ. ಜನವಸತಿಗಳಲ್ಲಿನ ಕಸವನ್ನು ಹಾಗೇ ಬಿಟ್ಟಿದ್ದಾರೆ. ಇದರಿಂದ ರಸ್ತೆ ಪಕ್ಕ, ಹೆದ್ದಾರಿಯ ಇಕ್ಕೆಲಗಳಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ಕಸ ಸುರಿಯಲಾಗುತ್ತಿದೆ. ಈ ಕುರಿತು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಸಿಬ್ಬಂದಿ ಕೊರತೆ, ಜಿಲ್ಲಾಡಳಿತದ ಗಮನಕ್ಕೆ ತಿಳಿಸಿದ್ದೇವೆ ಎಂದು ನೆಪ ಹೇಳಿ ಮುಂದಕ್ಕೆ ತಳ್ಳಲಾಗುತ್ತಿದೆ. ಕಸ ಮತ್ತು ಕುಡಿಯುವ ನೀರಿಗೆ ಆದ್ಯತೆಗಾಗಿ ಬಜೆಟ್ ಮಂಡಿಸಿರುವ ಪುರಸಭೆ ಇನ್ನೂ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.