ಬೆಂಗಳೂರು : ಕಾಂಗ್ರೆಸ್ ಭದ್ರಕೋಟೆ ಎಂದು ಬಿಂಬಿತವಾಗಿರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಭರ್ಜರಿ ರೋಡ್ ಶೋ ಮಾಡಿದರು.
ರೋಡ್ ಶೋ ಆರಂಭಕ್ಕೂ ಮುನ್ನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿ.ಸಿ ಮೋಹನ್, ಕಾಂಗ್ರೆಸ್ನವರು 20 ವರ್ಷಗಳ ಕಾಲ ತಿರುವಳ್ಳುವರ್ ಪ್ರತಿಮೆಯಲ್ಲಿ ರಾಜಕೀಯ ಮಾಡಿದರು. ಸುಮಾರು ಹದಿನಾಲ್ಕು ವರ್ಷಗಳ ಕಾಲ ತಿರುವಲ್ಲಾ ಪ್ರತಿಭೆಯನ್ನು ಬಟ್ಟೆಯಲ್ಲಿ ಮುಚ್ಚಿದರು. ಆದರೆ 2008ರಲ್ಲಿ ಸಿಎಂ ಆಗಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪನವರು ಕೇವಲ ಮೂರೇ ತಿಂಗಳಲ್ಲಿ ತಿರುವಳ್ಳವರ್ ಪ್ರತಿಮೆಯನ್ನು ಸ್ಥಾಪಿಸಿದರು ಎಂದು ಕಾಂಗ್ರೆಸ್ ವಿರುದ್ದ ಹರಿಹಾಯ್ದರು
ಮೈತ್ರಿ ಸರ್ಕಾರದ ವಿರುದ್ಧವು ಗುಡುಗಿದ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ 14 ತಿಂಗಳು ಆಡಳಿತ ನಡೆಸಿ ಪ್ರತಿದಿನ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವುದರಲ್ಲಿ ಕಾಲ ಕಳೆಯಿತು. ಹಗರಣಗಳಲ್ಲಿ ಮುಳುಗಿದ್ದ ಮೈತ್ರಿ ಸರ್ಕಾರಕ್ಕೆ ಸೂಪರ್ ಸಿಎಂ, ಡೆಪ್ಯುಟಿ ಸಿಎಂ ಇದ್ದರು. ಮೈತ್ರಿ ಸರ್ಕಾರದಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಕೇವಲ ಎರಡು ಕುಟುಂಬಗಳಿಗೆ ಮಾತ್ರ ಉಪಯೋಗವಾಗಿದೆ ಎಂಬುದನ್ನು ಅರಿತ ಅನರ್ಹ ಶಾಸಕರು ರಾಜೀನಾಮೆಯನ್ನು ನೀಡಿ ಮೈತ್ರಿ ಸರ್ಕಾರವನ್ನು ಕೆಡವಿದರು. ಈಗ ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲಿ ಬಿಜೆಪಿ ಪರ ಒಲವು ತೋರಿದ್ದು, ರಾಜ್ಯದ ಜನ ಒಂದು ಸ್ಥಿರ ಸರ್ಕಾರ ನಡೆಸಲು ನಮಗೆ ಅವಕಾಶ ನೀಡುತ್ತಾರೆ ಎಂದು ಅಭಿಪ್ರಾಯ ಪಟ್ಟರು.