ಬೆಂಗಳೂರು: 1947ರಲ್ಲಿ ದೇಶ ವಿಭಜನೆಯಾದ ಸಂದರ್ಭವನ್ನು ಎಲ್ಲೆಡೆ ನೆನಪಿಸುವ ಸಲುವಾಗಿ ಆಯೋಜಿಸಿರುವ ವಿಭಜನೆಯ ದುರಂತದ ಸ್ಮರಣೆಯ ದಿನ ಕಾರ್ಯಕ್ರಮವು ನಗರದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರದರ್ಶನದ ರೂಪದಲ್ಲಿ ಗೋಚರಿಸಿತು. ಬೆಂಗಳೂರಿನ ಪುರ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಧರ್ಮ ಭೇದ ಮರೆತು ಎಲ್ಲ ಸಮುದಾಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಭಾರತದಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ವಿಭಜಿಸಿದ ದಿನದ ಕಹಿ ನೆನಪನ್ನ ಸ್ವಾತಂತ್ರೋತ್ಸವ ಸಂಭ್ರಮದ ಮುನ್ನ ದಿನ ಆಚರಿಸುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶಾದ್ಯಂತ ಈ ವಿಭಜನೆಯ ದಿನವನ್ನು ನೆನಪಿಸಿಕೊಳ್ಳುವ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಿದೆ. ಈ ಕಾರ್ಯಕ್ರಮದ ಭಾಗವಾಗಿ ಪುರಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿಂದೂ ಹಾಗೂ ಮುಸ್ಲಿಂ ಭಾವೈಕ್ಯತೆ ಆತ್ಮೀಯವಾಗಿ ಗೋಚರಿಸಿತು.
![Partition Horrors Remembrance Day In Bengaluru](https://etvbharatimages.akamaized.net/etvbharat/prod-images/kn-bng-02-hindu-muslim-samagama-script-7208077_13082022131504_1308f_1660376704_375.jpg)
ಕಳೆದ 18 ವರ್ಷಗಳಿಂದ ಧರ್ಮ ಭೇದ ಮರೆತು ಆತ್ಮೀಯ ಸ್ನೇಹಿತರಾಗಿ ಮತ್ತು ಆತ್ಮೀಯ ಒಡನಾಡಿಗಳಾಗಿ ಬದುಕುತ್ತಿರುವ ಶೋಭಾ ಹಾಗೂ ರಶೀದಾ ಮತ್ತು ಅವರ ಸ್ನೇಹಿತೆಯರು ಇಂದಿನ ಚಿತ್ರ ಪ್ರದರ್ಶನದಲ್ಲಿ ವಿಶೇಷ ಗಮನ ಸೆಳೆದರು. ಧಾರ್ಮಿಕ ಭಾವೈಕ್ಯತೆಯ ಸಂಕೇತದ ರೂಪದಲ್ಲಿ ಈ ಆತ್ಮೀಯ ಸ್ನೇಹಿತರು ದೇಶ ವಿಭಜನೆಯ ದುರಂತದ ನೆನಪನ್ನ ಬಿತ್ತರಿಸುವ ಚಿತ್ರ ಪ್ರದರ್ಶನದಲ್ಲಿ ಪಾಲ್ಗೊಂಡು ಗಮನ ಸೆಳೆದರು.
![Partition Horrors Remembrance Day In Bengaluru](https://etvbharatimages.akamaized.net/etvbharat/prod-images/kn-bng-02-hindu-muslim-samagama-script-7208077_13082022131504_1308f_1660376704_435.jpg)
ಬೇಸರ ವ್ಯಕ್ತಪಡಿಸಿದ ಸ್ನೇಹಿತೆಯರು: ದೇಶ ವಿಭಜನೆ ಒಂದು ಕರಾಳ ನೆನಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸ್ನೇಹಿತೆಯರು ಇಂತದ್ದೊಂದು ಸನ್ನಿವೇಶ ಮನ ಕಲಕುವಂಥದ್ದು. ಭಾರತದೊಂದಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಒಟ್ಟಾಗಿ ಇದ್ದರೆ ಏಷ್ಯಾ ಖಂಡದಲ್ಲಿಯೇ ಒಂದು ಪ್ರಬಲ ರಾಷ್ಟ್ರವಾಗಿ ಇರುತ್ತಿತ್ತು.
ಆ ಸಂದರ್ಭದ ಅನಿವಾರ್ಯ ಏನಿತ್ತೋ ಗೊತ್ತಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಕೊಡುವ ಮುನ್ನ ಮೂರು ಭಾಗವಾಗಿ ಬ್ರಿಟಿಷರು ಭಾರತವನ್ನು ವಿಭಜಿಸಿದರು. ಅಂದು ನಮ್ಮಂತೆ ಸ್ನೇಹಿತೆಯರಾಗಿದ್ದ, ಆತ್ಮೀಯವಾಗಿ ಧರ್ಮ ಭೇದವನ್ನು ಮರೆತು ಒಟ್ಟಾಗಿ ಬದುಕುತ್ತಿದ್ದ ಅದೆಷ್ಟೋ ಮಂದಿ ಪ್ರತ್ಯೇಕವಾಗಿ ಹೋದರು.
![Partition Horrors Remembrance Day In Bengaluru](https://etvbharatimages.akamaized.net/etvbharat/prod-images/kn-bng-02-hindu-muslim-samagama-script-7208077_13082022131504_1308f_1660376704_628.jpg)
ಪ್ರತ್ಯೇಕ ರಾಷ್ಟ್ರ ವಿಭಜನೆ ಹೆಸರಿನಲ್ಲಿ ಅದೆಷ್ಟೋ ಮನಸ್ಸುಗಳನ್ನು ವಿಭಜಿಸಲಾಯಿತು. ಸಾಕಷ್ಟು ಮಂದಿ ತಮ್ಮ ನೆಲ ಕಳೆದುಕೊಂಡು ಬೇರೆಡೆ ಸ್ಥಳಾಂತರಗೊಂಡರು. ಇಂದಿಗೂ ಹೆಚ್ಚಿನವರಲ್ಲಿ ದೇಶ ವಿಭಜನೆಯ ನೋವು ಉಳಿದುಕೊಂಡಿದೆ. 75 ವರ್ಷಗಳ ಹಿಂದೆ ನಡೆದ ಘಟನೆ ಇಂದು ಇತಿಹಾಸ. ಈಗಲೂ ದೇಶ ವಿಭಜಿಸುವ ಮಾತುಗಳು ಆಗಾಗ ಕೇಳಿ ಬರುತ್ತದೆ.
ಜಾತಿ ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತದೆ. ಸೂಕ್ಷ್ಮ ಮನಸ್ಸುಗಳನ್ನು ಇವು ಅಪಾರವಾಗಿ ಘಾಸಿಗೊಳಿಸುತ್ತವೆ. ಜಾತಿ ಧರ್ಮದ ಭೇದ ಮರೆತು ವರ್ಷಗಳಿಂದ ಒಟ್ಟಾಗಿರುವ ನಮ್ಮ ಅಭಿಪ್ರಾಯ ವಿಭಜನೆಗಿಂತ ಒಗ್ಗಟ್ಟಿನಲ್ಲಿಯೇ ಹೆಚ್ಚಿನ ಬಲ ಇದೆ ಎಂಬುದಾಗಿದೆ. ಅಖಂಡ ಭಾರತ ಅಭಿವೃದ್ಧಿಗೆ ಇನ್ನೊಂದು ಹೆಸರಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಶಾಲೆ ಗೋಡೆಯಲ್ಲಿ ಅರಳಿದ ನಾಡ ಬಾವುಟ.. ಹೊಸ ರಂಗು ನೀಡಿದ ಗೆಳೆಯರ ಬಳಗ