ಬೆಂಗಳೂರು: ನಗರದ ಟರ್ಫ್ ಕ್ಲಬ್ ಚಟುವಟಿಕೆಗಳನ್ನು ಡಿ.2ರ ನಂತರ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಲೋಕೋಪಯೋಗಿ ಇಲಾಖೆಯು ಅಪರ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ ಎಂದು ಪಿಎಸಿ ಅಧ್ಯಕ್ಷ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಇಂದು ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟರ್ಫ್ ಕ್ಲಬ್ ಗುತ್ತಿಗೆ ಅವಧಿಯು 2009ರಲ್ಲಿಯೇ ಮುಕ್ತಾಯವಾಗಿದ್ದು, ಇದುವರೆಗೂ ಬಾಡಿಗೆ ಪಾವತಿಸಿಲ್ಲ. ಇದರಿಂದ 32.86 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ನ.30 ರೊಳಗೆ ಬಾಕಿ ಹಣವನ್ನು ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಮೈಸೂರು ಮಹಾರಾಜರು ಕುದುರೆ ಓಡಿಸುವ ಸ್ಪರ್ಧೆಗಾಗಿ 1923ರಲ್ಲಿ 83.14 ಎಕರೆ ಜಮೀನು ಬಾಡಿಗೆ ಆಧಾರದ ಮೇಲೆ ನೀಡಿದ್ದರು. 1981 ಜ.1ರಿಂದ ಜಾರಿಗೆ ಬರುವಂತೆ 30 ವರ್ಷದ ಗುತ್ತಿಗೆ ಪಡೆದು ವಾರ್ಷಿಕ 5 ಲಕ್ಷ ರೂ. ಬಾಡಿಗೆ ನೀಡಲು ಒಪ್ಪಂದವಾಗಿದೆ. ಅದರಂತೆ ರಾಜ್ಯ ಸರ್ಕಾರ ಈ ಒಪ್ಪಂದವನ್ನು ಕಾಲ ಕಾಲಕ್ಕೆ ತಿದ್ದುಪಡಿ ಮಾಡುವ ಹಾಗೂ ಅದನ್ನು ವಶಪಡಿಸಿಕೊಳ್ಳುವ ಅಧಿಕಾರ ಹೊಂದಿದೆ. 1989ರ ಆ.31 ಕ್ಕೆ ಟರ್ಫ್ ಕ್ಲಬ್ ಜೊತೆಗಿನ ಒಪ್ಪಂದ ಮುಕ್ತಾಯವಾಗಿದ್ದು, ಸರ್ಕಾರದ ಜಮೀನನ್ನು ವಶಕ್ಕೆ ಪಡೆದುಕೊಳ್ಳಲು ಆದೇಶ ನೀಡಿದರೂ ಟರ್ಫ್ ಕ್ಲಬ್‍ನವರು ಜಮೀನು ವಾಪಸ್ ನೀಡಿಲ್ಲ ಎಂದು ವಿವರಿಸಿದರು.
ಟರ್ಫ್ ಕ್ಲಬ್ನಿಂದ ಸರಿಯಾದ ಪ್ರಮಾಣದಲ್ಲಿ ಬಾಡಿಗೆ ಬಾರದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ 71.87 ಕೋಟಿ ರೂ. ನಷ್ಟವಾಗಿದೆ ಎಂದು ಸಿಎಜಿ ವರದಿ ನೀಡಿದೆ. ರಾಮಕೃಷ್ಣ ಹೆಗಡೆ ಅವರು ಹಣಕಾಸು ಸಚಿವರಾಗಿದ್ದಾಗ ಹಾಗೂ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಟರ್ಫ್ ಕ್ಲಬ್‌ನ್ನು ಸ್ಥಳಾಂತರಿಸಲು ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿತ್ತು ಎಂದು ತಿಳಿಸಿದರು.
2009 ರಲ್ಲಿ ಗುತ್ತಿಗೆ ಅವಧಿ ಮುಗಿದ ತಕ್ಷಣ ಟರ್ಫ್ ಕ್ಲಬ್ ತೆರವುಗೊಳಿಸುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಇದಕ್ಕೆ ಸುಪ್ರೀಂ ಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದಾರೆ. ಡಿ.2 ರೊಳಗೆ ಸುಪ್ರೀಂ ಕೋರ್ಟ್‌ನಲ್ಲಿನ ತಡೆಯಾಜ್ಞೆ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಂಡು ಡಿಸೆಂಬರ್ ಮೊದಲ ವಾರದಲ್ಲಿ ಸಮಿತಿಗೆ ವರದಿ ಸಲ್ಲಿಸುವಂತೆ ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದು ಹೆಚ್.ಕೆ.ಪಾಟೀಲ್ ತಿಳಿಸಿದರು.