ಬೆಂಗಳೂರು: ಬಿಜೆಪಿಯಲ್ಲಿ ತನ್ನದೇ ಆದ ಸ್ವಾತಂತ್ರ್ಯವಿದೆ. ಇದು ಕಾಂಗ್ರೆಸ್ ಪಕ್ಷದಲ್ಲಿ ಇದೆಯಾ? ಡಿ ಕೆ ಶಿವಕುಮಾರ್ಗೆ ಸ್ವಾತಂತ್ರ್ಯ ಇದೆಯಾ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್ ನಾಯಕರು ಯಾವ ನಿಟ್ಟಿನಲ್ಲಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದಾರೆ? ಬಿಜೆಪಿ ತನ್ನದೇ ಆದ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸುತ್ತಿದೆ. ನಮ್ಮದೇ ಆದ ಹಲವು ಕಾರ್ಯಕ್ರಮಗಳನ್ನು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನಕಲು ಮಾಡಿದ್ದಾರೆ. ಕಾಂಗ್ರೆಸ್ ಆನ್ಲೈನ್ ವ್ಯವಸ್ಥೆಯನ್ನು ಬಿಜೆಪಿ ಕಾಪಿ ಮಾಡುವ ಅಗತ್ಯ ಇಲ್ಲ. ಅಂತಹ ಪ್ರಶ್ನೆಯೂ ಉದ್ಭವಿಸಲಿಲ್ಲ. ಆದರೆ ವೇಣುಗೋಪಾಲ್ ಅವರೇ ನಮ್ಮ ವಿವಿಧ ಸಮಿತಿಗಳನ್ನು, ಬೂತ್ ಮಟ್ಟದ 14 ಕಾರ್ಯಕ್ರಮಗಳನ್ನು, ವಿವಿಧ ಸಮೂಹಗಳನ್ನು ನಿರ್ಮಿಸುವ ಕಾರ್ಯಕ್ರಮವನ್ನು ಕಾಪಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನ ನಾನು ಮಾತ್ರ ಹೇಳುತ್ತಿಲ್ಲ ಮಾಧ್ಯಮಗಳಲ್ಲಿಯೂ ಪ್ರಸಾರವಾಗಿದೆ. ಅಲ್ಲದೆ ಕಾಂಗ್ರೆಸ್ ಕಾರ್ಯಕ್ರಮವನ್ನು ತಡೆಯೊಡ್ಡಿ ನಮ್ಮ ಕಾರ್ಯಕ್ರಮ ನಡೆಸುತ್ತಿಲ್ಲ. ಅವರು ಕಾರ್ಯಕ್ರಮ ನಡೆಸುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಅವರ ವೀಕ್ಷಕರೆ ಬೇರೆ, ನಮ್ಮ ವೀಕ್ಷಕರೇ ಬೇರೆ. ಕಾಂಗ್ರೆಸ್ ನಡೆಸಲು ಉದ್ದೇಶಿಸಿದ್ದ ಆನ್ಲೈನ್ ಕಾರ್ಯಕ್ರಮವನ್ನು ಸರ್ಕಾರ ವಿರೋಧಿಸಿಲ್ಲ. ಇದರ ಬದಲಾಗಿ ಬೆಂಗಳೂರು ನಗರದಲ್ಲಿ 150 ಜನರನ್ನು ಸೇರಿಸಿ ನಡೆಸುವ ಕಾರ್ಯಕ್ರಮವನ್ನು ವಿರೋಧಿಸಿತ್ತು.
ಆದರೆ ಇದೀಗ ಮುಖ್ಯಮಂತ್ರಿಗಳು ಅದಕ್ಕೂ ಸಮ್ಮತಿ ಸೂಚಿಸಿರುವ ಹಿನ್ನೆಲೆ ಬೇರೆ ಪ್ರಶ್ನೆ ಉದ್ಭವಿಸುವುದಿಲ್ಲ. ಅವರ ಕಾರ್ಯಕ್ರಮದ ಸಮಯವೇ ಬೇರೆ ನಮ್ಮ ಕಾರ್ಯಕ್ರಮದ ಸಮಯವೇ ಬೇರೆ ಇದೆ. ಹೀಗಾಗಿ ಡಿಕೆಶಿ ಯಾವುದೇ ಕಾರಣಕ್ಕೂ ನಮ್ಮ ಮೇಲೆ ಆರೋಪ ಹೊರಿಸುವ ಬದಲು ತಮ್ಮ ಪಾಡಿಗೆ ತಾವು ಕಾರ್ಯಕ್ರಮ ನಡೆಸಿಕೊಳ್ಳಲಿ ಎಂದು ಸಲಹೆ ನೀಡಿದರು.
ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿಗೆ ಯಾವುದೇ ಅಚ್ಚರಿ ಆಗಿಲ್ಲ. ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಪರಸ್ಪರ ಮಾತನಾಡಿಯೇ ಈ ತೀರ್ಮಾನ ಕೈಗೊಂಡು ಅಭ್ಯರ್ಥಿಯ ಹೆಸರು ಪ್ರಕಟಿಸಿದ್ದಾರೆ. ಮೊದಲು ಮೂರು ಮಂದಿಯ ಪಟ್ಟಿ ಸಿದ್ಧಪಡಿಸಿ ನೀಡಿದ್ದಾಗಿ ಹೇಳಲಾಗಿತ್ತು. ನಂತರ ಬಿಜೆಪಿ ರಾಜ್ಯಾಧ್ಯಕ್ಷರು ಮಾತನಾಡಿ ಇನ್ನಷ್ಟು ಹೆಸರುಗಳ ಪಟ್ಟಿ ಕಳುಹಿಸಿ ಕೊಟ್ಟಿದ್ದೇವೆ ಎಂದು ವಿವರಿಸಿದರು. ರಾಜ್ಯದ ಮುಖ್ಯಮಂತ್ರಿಗಳ ಜೊತೆಗೂ ಸಮಾಲೋಚಿಸಿ ರಾಜ್ಯಸಭೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ ಎಂದು ವಿವರಿಸಿದರು.