ಬೆಂಗಳೂರು: ಈಗಿರುವಂತೆಯೇ ಏಳು ದಿನ ಸತತವಾಗಿ ಕಡಿಮೆ ಪ್ರಕರಣ ದಾಖಲಾದರೆ, ಕೋವಿಡ್ ಇಳಿಕೆಯಾಗಿದೆಯೆಂದು ಪರಿಗಣಿಸಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ನಗರದ ಕೋವಿಡ್ ಪರಿಸ್ಥಿತಿ, ವ್ಯಾಕ್ಸಿನ್ ವಿತರಣೆ ಹಾಗೂ ಲಾಕ್ಡೌನ್ ಸ್ಥಿತಿಗತಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3ನೇ ಅಲೆಯ ತಡೆಗೆ ಪ್ರಮುಖವಾಗಿ ವ್ಯಾಕ್ಸಿನೇಷನ್ ನೀಡಲಾಗುವುದು. ಎಲ್ಲರಿಗೂ ಲಸಿಕೆ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. 45 ವರ್ಷ ಮೇಲ್ಪಟ್ಟ 26 ಲಕ್ಷ ಜನರನ್ನು ಗುರುತು ಮಾಡಲಾಗಿದೆ. 15.43 ಲಕ್ಷ ಜನರು ಈಗಾಗಲೇ ಒಂದು ಡೋಸ್ ಪಡೆದಿದ್ದಾರೆ. ಶೇ 60 ರಷ್ಟು 45 ವರ್ಷದವರು ಒಂದನೇ ಡೋಸ್ ಲಸಿಕೆ ಪಡೆದಿದ್ದಾರೆ ಎಂದರು.
2ನೇ ಡೋಸ್ ಅರ್ಹರಿಗೂ ಫೋನ್ ಮಾಡಿ ಕರೆಯಲಾಗ್ತಿದೆ. ವೋಟರ್ ಲಿಸ್ಟ್ ಪ್ರಕಾರ ಗುರುತು ಮಾಡಿ ಕೊಡಲಾಗ್ತಿದೆ. 45 ಮೇಲ್ಪಟ್ಟಿರುವವರಲ್ಲಿ ಲಸಿಕೆ ಪ್ರಮಾಣ 75% ಗೆ ಏರಿಸುವುದು ಒಂದು ತಿಂಗಳ ಗುರಿ ಹಾಕಲಾಗಿದ್ದು, ಇದಕ್ಕೆ ಇನ್ನು ನಾಲ್ಕು ಲಕ್ಷ ಡೋಸ್ ಬೇಕಾಗಿದೆ, ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆ: 18-44 ವರ್ಷದ 64 ಲಕ್ಷ ಜನರನ್ನು ಗುರುತು ಮಾಡಲಾಗಿದ್ದು, ಈ ಪೈಕಿ 9 ಲಕ್ಷ ಜನರಿಗೆ ಒಂದನೇ ಡೋಸ್ ಕೊಡಲಾಗಿದೆ. ಆ ಪ್ರಕಾರ ಶೇ 13 ರಷ್ಟು ಜನರಿಗೆ ಕವರ್ ಆಗಿದ್ದು, ಇದನ್ನು 32 ಲಕ್ಷಕ್ಕೆ ಏರಿಕೆ ಮಾಡಲಾಗುವುದು. ಇದಕ್ಕಾಗಿ 23 ಲಕ್ಷ ಹೆಚ್ಚುವರಿ ಡೋಸ್ ಬೇಕಾಗಿದೆ. ಖಾಸಗಿ ಸಹಭಾಗಿತ್ವದೊಂದಿಗೆ ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಡೋನರ್ಗಳಿಂದ ಲಸಿಕೆ ಪಡೆಯುತ್ತಿದ್ದೇವೆ. ಈ ನಿಟ್ಟಿನಲ್ಲಿ ತಿಂಗಳಿಗೆ 30 ಲಕ್ಷ ಡೋಸ್ ಸಿಗುವ ನಿರೀಕ್ಷೆ ಇದೆ. 18-44 ವಯಸ್ಸಿನವರಿಗೆ ವ್ಯಾಕ್ಸಿನ್ ಕೊಡುವಲ್ಲಿ ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಹೆಚ್ಚು ಇದೆ ಎಂದು ತಿಳಿಸಿದರು.
ಫ್ಯಾಕ್ಟರಿಗಳು, ಕಂಪೆನಿಗಳು, ಖಾಸಗಿ ಆಸ್ಪತ್ರೆಗಳ ಜೊತೆ ಕೈಜೋಡಿಸಿ ವ್ಯಾಕ್ಸಿನೇಷನ್ ಏರ್ಪಾಟು ಮಾಡುತ್ತಿದ್ದಾರೆ. ದಾನಿ ಸಂಸ್ಥೆಗಳ ಜೊತೆಗೆ ಟೈ-ಅಪ್ ಮಾಡಿಕೊಂಡು ಸಮಾಜದ ಕೆಳವರ್ಗದಲ್ಲಿರುವ ಜನರಿಗೆ, ವ್ಯಾಕ್ಸಿನ್ಗಾಗಿ ಹಣ ಕೊಡಲು ಸಾಧ್ಯವಿಲ್ಲದವರಿಗೆ ಆಕ್ಷನ್ ಕೋವಿಡ್ ಟಾಸ್ಕ್ ಫೋರ್ಸ್ ಮೂಲಕ ಸ್ಲಂ, ಗಾರ್ಮೆಂಟ್, ಎಮ್ ಎಸ್ ಎಮ್ ಇ ಕಾರ್ಮಿಕರಿಗೆ ಲಸಿಕೆ ಕೊಡಲಾಗ್ತಿದೆ. 30 ದಿನದೊಳಗೆ 30 ಲಕ್ಷ ಡೋಸ್ ಕೊಡುವ ಗುರಿ ಇದೆ ಎಂದು ಹೇಳಿದರು.
ನಗರದ ಬೆಡ್ ಲಭ್ಯತೆ ಬಗ್ಗೆ ಮಾತನಾಡಿ, ಒಟ್ಟಾರೆ ಇರುವ 13,200 ಬೆಡ್ಗಳಲ್ಲಿ 9 ಸಾವಿರ ಬೆಡ್ ಲಭ್ಯ ಇವೆ. 3400 ರಷ್ಟು ಬೆಡ್ಗಳು ಮಾತ್ರ ಬಳಕೆಯಾಗ್ತಿವೆ. ಸಿಸಿಸಿ ಕೇಂದ್ರದಲ್ಲಿ 3400 ಬೆಡ್ಗಳನ್ನು ಕಡಿಮೆ ಮಾಡಲಾಗುತ್ತದೆ. ಎಲ್ಲವನ್ನೂ ಮುಚ್ಚುವುದಿಲ್ಲ. ಬದಲಾಗಿ ಇಲ್ಲಿ ನಿಯೋಜಿಸಿರುವ ವೈದ್ಯರು, ನರ್ಸ್ಗಳನ್ನು ಕಡಿಮೆ ಮಾಡಲಾಗುವುದು. ಟ್ರಯಾಜಿಂಗ್ ಸೆಂಟರ್ 16 ಇದ್ದು, ಇದನ್ನು ಮುಚ್ಚುವುದಿಲ್ಲ ಎಂದರು.
ಜನರಿಂದ ಶುಲ್ಕ ಪಡೆದು ವ್ಯಾಕ್ಸಿನ್: ಲಸಿಕೆ ಉತ್ಪಾದನೆಯ ಶೇ 50 ರಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರದ ಸೂಚನೆಯಂತೆ 45 ವರ್ಷ ಮೇಲ್ಪಟ್ಟವರಿಗೆ ಕೊಡಲಾಗುವುದು. ಇನ್ನು ಶೇ 25 ರಾಜ್ಯ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ನೀಡಲಾಗ್ತಿದೆ. ಉಳಿದ ಶೇ 25 ರಷ್ಟು ಉತ್ಪಾದನೆಯನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗುತ್ತಿದೆ. ನಗರದಲ್ಲಿ ಹೆಚ್ಚು ಖಾಸಗಿ ಆಸ್ಪತ್ರೆಗಳು ಇರುವುದರಿಂದ ಹೆಚ್ಚು ಲಸಿಕೆ ಪಡೆದು, ಜನರಿಂದ ಶುಲ್ಕ ಪಡೆದು ವ್ಯಾಕ್ಸಿನ್ ನೀಡುತ್ತಿದ್ದಾರೆ ಎಂದರು.
ಮಕ್ಕಳಿಗೆಗಾಗಿ ಇಂಟೆನ್ಸಿವ್ ಕೇರ್ ಯೂನಿಟ್ : ಸರ್ಕಾರಿ ರಂಗದ ಆಸ್ಪತ್ರೆಗಳಲ್ಲಿ ಮಕ್ಕಳಿಗೆಗಾಗಿ ಇಂಟೆನ್ಸಿವ್ ಕೇರ್ ಯೂನಿಟ್ ಸಿದ್ಧತೆ ಮಾಡಲಾಗುತ್ತಿದೆ. ಮಕ್ಕಳನ್ನು ಸಿಸಿಸಿ ಕೇಂದ್ರಕ್ಕೂ ದಾಖಲು ಮಾಡಿಕೊಳ್ಳಲು ಸಾಧ್ಯವಿದೆ. ಮಕ್ಕಳ ಜೊತೆಗೆ ಪೋಷಕರೂ ಬಂದಿರುವ ವ್ಯವಸ್ಥೆ ಮಾಡಲಾಗುವುದು ಎಂದ ಅವರು, ನಗರದಲ್ಲಿರುವ ಮಕ್ಕಳ ಆಸ್ಪತ್ರೆ, ತಜ್ಞರ ಅಂಕಿ- ಸಂಖ್ಯೆಗಳ ಬಗ್ಗೆ ಹೆಚ್ಚಿನ ವಿವರ ಲಭ್ಯ ಇಲ್ಲ ಎಂದು ಮುಖ್ಯ ಆಯುಕ್ತರು ತಿಳಿಸಿದರು.
ಓದಿ: ರೇಣುಕಾಚಾರ್ಯ ಹೇಳಿಕೆ ವಿಚಾರ: ಯಾರ ಬಗ್ಗೆಯೂ ವೈಯಕ್ತಿಕ ಪ್ರತಿಕ್ರಿಯೆ ಕೊಡಲಾರೆ ಎಂದ ಬೆಲ್ಲದ್