ಬೆಂಗಳೂರು: ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿಲ್ಲಲ್ಲ. ಅದು ಮುಂದುವರೆಯುತ್ತದೆ. ಗುತ್ತಿಗೆದಾರರ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಕೈಗೊಳ್ಳುತ್ತೇವೆ. ಗುತ್ತಿಗೆದಾರರ ಬಾಕಿ ಮೊತ್ತ ಬಿಡುಗಡೆ, ಭ್ರಷ್ಟಾಚಾರ ನಿಯಂತ್ರಣ, ಜಿಎಸ್‌ಟಿ ಗೊಂದಲ ಸೇರಿ ಹಲವು ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮತ್ತೆ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಅಸೋಸಿಯೇಷನ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಡಿ ಕೆಂಪಣ್ಣ, ಸರ್ಕಾರ ಒಟ್ಟು 25 ಸಾವಿರ ಕೋಟಿ ಬಾಕಿ ಮೊತ್ತ ಬಿಡುಗಡೆ ಮಾಡಬೇಕು. ಲೋಕೋಪಯೋಗಿ ಇಲಾಖೆಯಲ್ಲಿ 4 ಸಾವಿರ ಕೋಟಿ ಬಿಲ್ ಬಾಕಿಯಿದೆ. ಬೃಹತ್ ಮತ್ತು ಮಧ್ಯಮ ನೀರಾವರಿ ಮತ್ತು ಸಣ್ಣ ನೀರಾವರಿ ಇಲಾಖೆಯಲ್ಲಿ ಸುಮಾರು 8 ಸಾವಿರ ಕೋಟಿ ಮೊತ್ತದ ಬಾಕಿ ಬಿಲ್ ಬರಬೇಕಾಗಿದೆ. ಬಿಬಿಎಂಪಿ 3 ಸಾವಿರ ಕೋಟಿ ಬಾಕಿ ಬಿಲ್ ಉಳಿಸಿಕೊಂಡಿವೆ. ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲಲ್ಲ. ಇದೇ ತಿಂಗಳ 18 ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಕೈಗೊಂಡಿದ್ದೇವೆ. ಪ್ರತಿಭಟನೆಯಲ್ಲಿ ರಾಜ್ಯದ ಸುಮಾರು 20,000ಕ್ಕೂ ಹೆಚ್ಚು ಗುತ್ತಿಗೆದಾರರು ಭಾಗಿಯಾಗಲಿದ್ದಾರೆ ಎಂದ ಕೆಂಪಣ್ಣ ಹೇಳಿದರು.
ಗುತ್ತಿಗೆದಾರರು ಹೇಳ್ತಿರೋದೇನು?: ಇತ್ತೀಚಿನ ವರ್ಷಗಳಲ್ಲಿ ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ನಮ್ಮ ಬೇಡಿಕೆಗಳು ಮತ್ತು ಸಮಸ್ಯೆಗಳಿಗೆ ಸರ್ಕಾರಗಳೂ ಸ್ಪಂದಿಸುತ್ತಿಲ್ಲ. ಪ್ರತಿ ಸರ್ಕಾರಕ್ಕೂ ಮನವಿ ಸಲ್ಲಿಸುತ್ತಾ ನಮ್ಮ ಬೇಡಿಕೆಗಳಿಗೆ ಹಂತ ಹಂತವಾಗಿಯಾದರೂ ಸ್ಪಂದಿಸುವಂತೆ ಕೇಳಿಕೊಳ್ಳುತ್ತಿದ್ದರೂ ನಿರ್ಲಕ್ಷ್ಯ ಧೋರಣೆಯನ್ನು ಪ್ರದರ್ಶಿಸುತ್ತಿವೆ. ಮುಖ್ಯಮಂತ್ರಿಗಳು, ಸಚಿವರು ಮತ್ತು ಅಧಿಕಾರಿಗಳಿಗೆ ನೂರಾರು ಪತ್ರಗಳನ್ನು ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಹೋರಾಟದ ಹಾದಿಯನ್ನು ಹಿಡಿಯುವುದು ಅನಿವಾರ್ಯವಾಗಿದೆ. ನಮ್ಮ ಈ ಹೋರಾಟಕ್ಕೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳು ಮತ್ತು ತಾಲೂಕು ಕೇಂದ್ರಗಳಲ್ಲಿ ಹೋರಾಟ ನಡೆಸಲಾಗುತ್ತೆ. ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಬೇಕಾಗುತ್ತದೆ. ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ನಮ್ಮ ಬೇಡಿಕೆಗಳು ಈಡೇರಿಸಲಾಗದಂತಹ ಸಮಸ್ಯೆಗಳೇನೂ ಅಲ್ಲ. ಪೂರ್ಣಗೊಳಿಸಿರುವ ಕಾಮಗಾರಿಗಳಿಗೆ ಬಾಕಿ ಮೊತ್ತ ಬಿಡುಗಡೆ ಮಾಡುವಂತೆ ಕೇಳುವುದು ತಪ್ಪೇ?.. ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುವಂತೆ ಆಗ್ರಹಿಸುವುದು ತಪ್ಪೇ?.. ಜಿಎಸ್‌ಟಿ ಗೊಂದಲವನ್ನು ಬಗೆಹರಿಸುವಂತೆ ಕೇಳುವುದೇ ತಪ್ಪೇ?.. ಈ ಸಮಸ್ಯೆಗಳಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆಲವೇ ದಿನಗಳಲ್ಲಿ ಪರಿಹಾರ ರೂಪಿಸಬಹುದಾದರೂ ಸರ್ಕಾರ ಕಡೆಗಣಿಸುತ್ತಿದೆ. ಆದ್ದರಿಂದ ಹೋರಾಟದ ಮೂಲಕವೇ ಸರ್ಕಾರವನ್ನು ಎಚ್ಚರಿಸುವುದು ಅನಿವಾರ್ಯವಾಗಿದೆ. ಈ ಹಿಂದೆ 2022ರ ಏಪ್ರಿಲ್‌ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಗುತ್ತಿಗೆದಾರರೊಂದಿಗೆ ಚರ್ಚಿಸಿದ್ದರು. ಸಮಸ್ಯೆಗಳು ಮತ್ತು ಬೇಡಿಕೆಗಳಿಗೆ ಪರಿಹಾರ ರೂಪಿಸುವ ಭರವಸೆ ನೀಡಿದ್ದರು. ಆದ್ರೆ ಇಂದಿಗೂ ಯಾವುದೇ ಪ್ರಯೋಜನವಾಗಿಲ್ಲ. ಅವರ ಭರವಸೆಗಳು ಕೇವಲ ಕಡತಗಳಲ್ಲಿ ಮಾತ್ರ ಉಳಿದುಕೊಂಡಿವೆ ಎಂದರು.
ಗುತ್ತಿಗೆದಾರರ ಬೇಡಿಕೆಗಳೇನು?: ಬಾಕಿ ಬಿಲ್ 25 ಸಾವಿರ ಕೋಟಿ ಕೂಡಲೇ ಬಿಡುಗಡೆ ಮಾಡಬೇಕು. ಭ್ರಷ್ಟಾಚಾರ ನಿಯಂತ್ರಣ ಮಾಡಬೇಕು. 40% ಕಮೀಷನ್ ಕುರಿತಂತೆ ಈಗ ಮಾತನಾಡೋದಿಲ್ಲ. ನಮ್ಮ ವಕೀಲರು ಇದರ ಬಗ್ಗೆ ಮಾತನಾಡಬೇಡಿ ಎಂದಿದ್ದಾರೆ. ಕೆಲವು ಲಂಚ ಕೊಟ್ಟಿರುವ ಕುರಿತಂತೆ ಕೆಲವು ದಾಖಲೆಗಳು ಇರೋದಿಲ್ಲ. ಇನ್ನೊಂದು ತಿಂಗಳ ಬಳಿಕ ಈ ಬಗ್ಗೆ ಮಾತನಾಡುತ್ತೀನಿ ಎಂದರು.
ಶಿವರಾತ್ರಿಯ ಸಂದರ್ಭದಲ್ಲಿ ಕಮೀಷನ್ ಕುರಿತಂತೆ ದಾಖಲೆ ಬಿಡುಗಡೆ ಮಾಡ್ತೀವಿ. ಆಡಿಯೋ, ವೀಡಿಯೋ ಎಲ್ಲವೂ ಇದೆ. ಎಲ್ಲಾ ದಾಖಲೆ ಬಿಡುಗಡೆ ಮಾಡ್ತೀವಿ. ಇನ್ನು 30 ದಿನಗಳ ನಂತರ ದಾಖಲೆ ಬಿಡುಗಡೆ ಮಾಡ್ತೀವಿ. ಮುನಿರತ್ನ ದಾಖಲೆ ಬಿಡಬೇಡಿ ಎಂದು ಸ್ಟೇ ತೆಗೆದುಕೊಂಡಿದ್ದಾರೆ. ಸಾಧ್ಯವಾದಷ್ಟು ಬೇಗ ಕಮೀಷನ್ ಕುರಿತಾದ ದಾಖಲೆ ಬಿಡುಗಡೆ ಮಾಡ್ತೀವಿ ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಅವರಿಗೆ ಕಳೆದ 2019 ರಿಂದ ಇಲ್ಲಿಯವರೆಗೆ 90 ಲಕ್ಷ ಕಮಿಷನ್ ಕೊಟ್ಟಿದ್ದೇನೆ. ವೈದ್ಯರಾಗಿರುವ ಅವರ ಮಗನ ಎದುರೇ ಹಣ ಕೊಟ್ಟಿದ್ದೇನೆ. ದೇವರ ಮೇಲೆ ಪ್ರಮಾಣ ಮಾಡುತ್ತೇನೆ. ಕೋವಿಡ್ ಮೊದಲ ಹಂತದಲ್ಲಿ 10 ಲಕ್ಷ ರೂಪಾಯಿ ಮತ್ತು ಎರಡನೇ ಕೋವಿಡ್ ಸಮಯದಲ್ಲಿ 12 ಲಕ್ಷ ಕೊಟ್ಟಿದ್ದೇನೆ ಎಂದು ಗಂಭೀರ ಆರೋಪ ಮಾಡಿದರು.
ಓದಿ: ಮಾನನಷ್ಟ ಮೊಕ್ಕದ್ದಮೆ ಪ್ರಕರಣ: ಗುತ್ತಿಗೆದಾರ ಕೆಂಪಣ್ಣ ಸೇರಿ ಐವರಿಗೆ ಜಾಮೀನು