ಬೆಂಗಳೂರು : ನರೇಗಾ ಯೋಜನೆಯಡಿ ಗ್ರಾಮ ಪಂಚಾಯತ್‌ಗಳಿಗೆ ಗ್ರಾಮ ಕಾಯಕ ಮಿತ್ರರನ್ನು ನೇಮಕ ಮಾಡುವ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
2020-21ನೇ ಸಾಲಿನಲ್ಲಿ 20 ಸಾವಿರ ಮಾನವ ದಿನಗಳಿಗಿಂತ ಹೆಚ್ಚಿನ ಉದ್ಯೋಗ ಸೃಜನೆ ಮಾಡಿದ ಗ್ರಾಮ ಪಂಚಾಯತ್‌ಗಳಲ್ಲಿ ಗ್ರಾಮ ಕಾಯಕ ಮಿತ್ರರನ್ನು ಗೌರವಧನದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ರಾಜ್ಯದಲ್ಲಿ ಈ ಅರ್ಹತೆ ಹೊಂದಿರುವ 2110 ಗ್ರಾಮ ಪಂಚಾಯತ್‌ಗಳಿವೆ. ಈ ಹುದ್ದೆಗಳಿಗೆ ಎಸ್ಎಸ್ಎಲ್ಸಿ ಉತ್ತೀರ್ಣರಾಗಿರುವ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯತ್‌ಗಳಲ್ಲಿ ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ಹೊಂದಿರಬೇಕು. ಮೂರು ವರ್ಷಗಳಲ್ಲಿ ಎರಡು ವರ್ಷ ಯೋಜನೆಯಡಿ ಕೂಲಿಕಾರರಾಗಿ ಕೆಲಸ ನಿರ್ವಹಿಸಿರಬೇಕು. ಗ್ರಾಮ ಕಾಯಕ ಮಿತ್ರರಿಗೆ ಮಾಸಿಕ ಆರು ಸಾವಿರ ರೂ. ಗೌರವಧನ ನೀಡಲಾಗುತ್ತದೆ. ಕಾರ್ಯನಿರ್ವಹಣೆ ಆಧರಿಸಿ 5 ಸಾವಿರ ರೂ. ಪ್ರೋತ್ಸಾಹಧನ ಪಡೆಯಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 10 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಯನ್ನು ಆಯಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಚೇರಿಯಲ್ಲಿ ಪಡೆಯಬಹುದು ಎಂದು ತಿಳಿಸಲಾಗಿದೆ. ಪ್ರಸ್ತುತ ವರ್ಷದಲ್ಲಿ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಗ್ರಾಮೀಣ ಪ್ರದೇಶಗಳಿಗೆ ಹಿಂತಿರುಗಿ ಬಂದ ಜನರಿಗೆ ಸ್ಥಳೀಯವಾಗಿ ಕೆಲಸ ಒದಗಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅವಿರತ ಶ್ರಮಿಸುತ್ತಿದೆ.
ಪ್ರಸ್ತುತ ಸಾಲಿನಲ್ಲಿ ಕಳೆದ ಐದು ವರ್ಷಗಳಲ್ಲಿಯೇ ಅತಿ ಹೆಚ್ಚು, 14.58 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ ಮಾಡಲಾಗಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ಒಟ್ಟು 3926.37 ಕೋಟಿ ರೂ. ಕೂಲಿಯನ್ನು ನೇರವಾಗಿ ಕೂಲಿಕಾರರ ಖಾತೆಗಳಿಗೆ ಪಾವತಿಸಲಾಗಿದೆ.
ಪ್ರಸ್ತುತ ವರ್ಷದ ಪ್ರಾರಂಭದಲ್ಲಿ ನೀಡಲಾಗಿದ್ದ 13 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ ಗುರಿಯನ್ನು ಕೇಂದ್ರ ಸರ್ಕಾರವು 14.65 ಕೋಟಿ ಮಾನವ ದಿನಗಳಿಗೆ ಪರಿಷ್ಕರಿಸಿದ ಕಾರಣ ರಾಜ್ಯಕ್ಕೆ ಯೋಜನೆಯಡಿ 800 ಕೋಟಿ ರೂ. ಅನುದಾನ ಹೆಚ್ಚುವರಿಯಾಗಿ ಲಭ್ಯವಾಗಲಿದೆ.
ಈ ವರ್ಷ 7.01 ಲಕ್ಷ ಹೊಸ ಜಾಬ್ ಕಾರ್ಡ್ಗಳನ್ನು ನೀಡುವ ಮೂಲಕ 16.68 ಲಕ್ಷ ಜನರನ್ನು ಯೋಜನೆಗೆ ಸೇರ್ಪಡೆ ಮಾಡಲಾಗಿದೆ. ಪ್ರಸ್ತುತ ಸಾಲಿನಲ್ಲಿ ಕಳೆದ 5 ವರ್ಷಗಳಲ್ಲಿಯೇ ಅತಿ ಹೆಚ್ಚು 29.93 ಲಕ್ಷ ಕುಟುಂಬಗಳ 56.29 ಲಕ್ಷ ಜನರಿಗೆ ಯೋಜನೆಯಡಿ ಉದ್ಯೋಗ ನೀಡಲಾಗಿದೆ.