ಬೆಂಗಳೂರು: ಕೊರೊನಾ ವಿರುದ್ಧ ಹೋರಾಟದಲ್ಲಿ ಗ್ರೂಪ್ ಡಿ ನೌಕರರ ಪಾತ್ರ ಪ್ರಮುಖವಾದದ್ದು. ಕೋವಿಡ್ ನಿಯಂತ್ರಣ ಮಾಡಲು ಕೆಲಸ ಮಾಡುತ್ತಿರುವ ಅವರ ಕಾರ್ಯಕ್ಕೆ ಪ್ರೋತ್ಸಾಹ ಕೊಡುವ ದೃಷ್ಟಿಯಿಂದ 10,000 ರೂ. ಹೆಚ್ಚುವರಿ ಅಪಾಯ ಭತ್ಯೆ ನೀಡಲು ಆದೇಶಿಸಲಾಗಿದೆ ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಇನ್ನು ಕೊರೊನಾ ವಾರಿಯರ್ಗಳನ್ನು ಸಚಿವ ಸುಧಾಕರ್ ವಿಷಕಂಠನಿಗೆ ಹೋಲಿಸಿದ್ದಾರೆ. ತಮ್ಮ ಜೀವವನ್ನು ಲೆಕ್ಕಿಸದೇ ಜನರ ಜೀವಕ್ಕಾಗಿ ಹೋರಾಡುತ್ತಿದ್ದಾರೆ. ಅವರಿಗೆ ಸೆಲ್ಯೂಟ್ ಹೊಡೆಯಲೇಬೇಕು, ಗೌರವ ಕೊಡಬೇಕು ಎಂದರು.
ಇನ್ನು ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಲ್ಯಾಬ್ ಸ್ಥಾಪಿಸುವಂತೆ ಸೂಚಿಸಲಾಗಿತ್ತು. ಹೀಗಾಗಿ ಇಂದು ಕಾಲೇಜಿನ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು 10 ದಿನಗಳಲ್ಲಿ ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಇತ್ತ ಒಪ್ಪಿಗೆಯಂತೆ ಹಾಸಿಗೆ ನೀಡದ ಖಾಸಗಿ ವೈದ್ಯಕೀಯ ಆಸ್ಪತ್ರೆಗಳಾದ ಸಪ್ತಗಿರಿ, ಬಿಜಿಎಸ್, ಅಂಬೇಡ್ಕರ್ ವೈದ್ಯಕೀಯ ಕಾಲೇಜು ಇವರಿಗೆ ಈಗಾಗಲೇ ಖಡಕ್ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ಡ್ಯಾಶ್ ಬೋರ್ಡ್ ಮಾಹಿತಿ ಲಭ್ಯ: ಡ್ಯಾಶ್ ಬೋರ್ಡ್ನಲ್ಲಿ ಮಾಹಿತಿ ಲಭ್ಯವಿರಲಿದ್ದು, ಕೋವಿಡ್ ಆಸ್ಪತ್ರೆ ಯಾವುದು? ಯಾವ ಏರಿಯಾದಲ್ಲಿ ಆಸ್ಪತ್ರೆ ಇದೆ? ಎಷ್ಟು ಹಾಸಿಗೆ ಲಭ್ಯತೆ, ವೆಂಟಿಲೇಟರ್ ಇದಿಯಾ ಎಂಬೆಲ್ಲ ರಿಯಲ್ ಟೈಮ್ ಮಾಹಿತಿ ಲಭ್ಯವಿರಲಿದೆ.
ಇಷ್ಟು ದಿನ ಲ್ಯಾಬ್ನಲ್ಲಿ ಗಂಟಲು ದ್ರವ ಕೊಟ್ಟು ಬಂದ ನಂತರ ರಿಪೋರ್ಟ್ ಬರುವವರೆಗೆ ಕಾಯಬೇಕಿತ್ತು. ಇದರಿಂದ ಉಸಿರಾಟದ ತೊಂದರೆ ಇರುವವರು ಸಂಕಷ್ಟ ಅನುಭವಿಸಬೇಕಿತ್ತು. ಆದರೆ ಇನ್ಮುಂದೆ ಅದರ ಅವಶ್ಯಕತೆ ಇರೋದಿಲ್ಲ. ಇವತ್ತಿನಿಂದ ಹೊಸ ಆದೇಶ ಹೊರಡಿಸಿದ್ದು ಅಂತಹವರನ್ನು ಕೂಡಲೇ ದಾಖಲು ಮಾಡಿಕೊಳ್ಳಬೇಕು ಎಂದರು.