ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ತೊಡೆತಟ್ಟಿರುವ ವಿಪಕ್ಷಗಳು ಪಾಟ್ನಾ ಬಳಿಕ ತಮ್ಮ ಎರಡನೇ ಸಭೆಯನ್ನು ಇಲ್ಲಿ ಜುಲೈ 18 ರಂದು ನಡೆಸಲಿದ್ದು, ಅದರ ಸಿದ್ಧತೆ ಪರಿಶೀಲನೆಗೆ ದೆಹಲಿ ನಾಯಕರು ರಾಜ್ಯಕ್ಕೆ ಆಗಮಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯ ಸಿದ್ಧತೆಗಳ ವೀಕ್ಷಣೆ ಮಾಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಬೆಂಗಳೂರಿನ ತಾಜ್ ವೆಸ್ಟೆಂಡ್ನಲ್ಲಿ ಸಭೆ ನಡೆಯಲಿದ್ದು, ಒಟ್ಟು 24 ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಕಾಂಗ್ರೆಸ್, ಎಎಪಿ, ಟಿಎಂಸಿ, ಡಿಎಂಕೆ, ಜೆಡಿಯು, ಎನ್ಸಿಪಿ, ಕೇರಳ ಕಾಂಗ್ರೆಸ್(ಎಂ), ಕೇರಳ ಕಾಂಗ್ರೆಸ್( ಜೆ), ಆರ್ ಎಸ್ ಪಿ, ಫಾರ್ವರ್ಡ್ ಬ್ಲಾಕ್, ವಿಸಿಕೆ, ಎಂಡಿಎಂಕೆ, ಅಕಾಲಿದಳ, ಎಸ್ಪಿ ಸೇರಿದಂತೆ 24 ಪಕ್ಷಗಳಿಗೆ ಸಭೆಗೆ ಆಹ್ವಾನ ನೀಡಲಾಗಿದೆ.
ಆಡಳಿತ ಪಕ್ಷಗಳ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಆಡಳಿತ, ಪ್ರತಿಪಕ್ಷ ನಾಯಕರು, ಪಕ್ಷಗಳ ಅಧ್ಯಕ್ಷರುಗಳಿಗೆ ಮಾತ್ರ ಸಭೆಗೆ ಆಹ್ವಾನ ನೀಡಲಾಗಿದ್ದು, ಸಂಸದರು, ಶಾಸಕರಿಗೆ ಆಹ್ವಾನಿಸಿಲ್ಲ ಎಂದು ತಿಳಿದುಬಂದಿದೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಬಿಹಾರ ಸಿಎಂ ನಿತೀಶ್ ಕುಮಾರ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ನಾಯಕರಾದ ತೇಜಸ್ವಿ ಯಾದವ್, ಅಖಿಲೇಶ್ ಸಿಂಗ್ ಯಾದವ್, ಶರದ್ ಪವಾರ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ಗೆ ಇಲ್ಲ ಆಹ್ವಾನ: ಇತ್ತ ರಾಜ್ಯದ ಸ್ಥಳೀಯ ಜೆಡಿಎಸ್ಗೆ ವಿಪಕ್ಷಗಳ ಸಭೆಗೆ ಅಹ್ವಾನ ನೀಡಲಾಗಿಲ್ಲ. ಬಿಹಾರದ ಪಾಟ್ನಾದಲ್ಲಿ ನಡೆದಿದ್ದ ಮೊದಲ ಸಭೆಯಲ್ಲೂ ದಳ ಪಕ್ಷಕ್ಕೆ ಆಹ್ವಾನ ನೀಡಲಾಗಿರಲಿಲ್ಲ. ಇಲ್ಲಿ 17 ಕ್ಕೂ ಅಧಿಕ ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದವು.
ಜು.19 ರಂದು ಶಾಸಕಾಂಗ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 19 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ಸಿದ್ಧತೆ ಕುರಿತು ಚರ್ಚಿಸಲಿದ್ದಾರೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದ್ದು, ಬಿಜೆಪಿಯನ್ನು ಮಣಿಸಲು ವಿವಿಧ ಕಾರ್ಯತಂತ್ರಗಳ ಬಗ್ಗೆ ಸಮಾಲೊಚನೆ ನಡೆಸಲಿದ್ದಾರೆ. ಇದರ ಭಾಗವಾಗಿಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜುಲೈ 19ರಂದು ಬೆಂಗಳೂರಿನಲ್ಲಿ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲೇ ಎಲ್ಲ ಸಚಿವರಿಗೂ ರಾಹುಲ್ ಗಾಂಧಿ ಸಲಹೆ ಸೂಚನೆ ನೀಡಲಿದ್ದಾರೆ. ಅಲ್ಲದೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸಚಿವರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರಿನ ವಿಪಕ್ಷಗಳ ಸಭೆಗೆ ಬರಲಿದ್ದಾರೆ ಸೋನಿಯಾ; ಕೆಲವು ಎನ್‌ಡಿಎ ಮಿತ್ರಪಕ್ಷಗಳ ಬೆಂಬಲ