ಬೆಂಗಳೂರು: ಮೇಕೆದಾಟು ಯೋಜನೆ ಜಾರಿಯಿಂದ ತಮಿಳುನಾಡಿಗೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ಅವರು ಅನಗತ್ಯವಾಗಿ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷರ ಡಿ.ಕೆ.ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕೆ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಯೋಜನೆ ಜಾರಿಗೆ ಬೇರೆ ಯಾವ ತಕರಾರು ಇಲ್ಲದ ಕಾರಣ ರಾಜ್ಯ ಸರ್ಕಾರ ಕೂಡಲೇ ಯೋಜನೆ ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿದರು.
ಈ ಯೋಜನೆಯಿಂದ ತಮಿಳುನಾಡಿನ ಜನತೆಗೆ ಯಾವುದೇ ತೊಂದರೆ ಇಲ್ಲ. ಬದಲಾಗಿ ಒಂದಷ್ಟು ಲಾಭವಾಗುತ್ತದೆ. ವಿದ್ಯುತ್ ಉತ್ಪಾದನೆ, ಬೆಂಗಳೂರಿಗೆ ಕುಡಿಯುವ ನೀರಿನ ಜೊತೆಗೆ ಮೇಕೆದಾಟು ಅಣೆಕಟ್ಟಿನಲ್ಲಿ ನೀರು ಶೇಖರಣೆ ಆಗುವುದರಿಂದ ತಮಿಳುನಾಡಿನಲ್ಲಿ ನೀರಿನ ಅಭಾವ ಇದ್ದಾಗ ಅವರಿಗೆ ಅದನ್ನು ಉಪಯೋಗಿಸಿಕೊಳ್ಳಲು ಅವಕಾಶವಾಗುತ್ತದೆ. ಯೋಜನೆ ಅನುಷ್ಠಾನವಾದ ಮೇಲೆ ಕೂಡ ಕಾವೇರಿ ಪ್ರಾಧಿಕಾರವು ನ್ಯಾಯಾಲಯದ ಆದೇಶದ ಅನುಸಾರ ತಮಿಳುನಾಡಿನ ಪಾಲಿನ ನೀರನ್ನು ಅವರಿಗೆ ಬಿಡುತ್ತದೆ. ತಮಿಳುನಾಡಿನವರು ರಾಜಕೀಯ ಕಾರಣಕ್ಕೆ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ವಿನಃ ಬೇರೆ ಯಾವ ಕಾರಣಗಳು ಇಲ್ಲ ಎಂದರು.
ಎಲ್ಲಾ ಹಕ್ಕುಗಳಿವೆ
ಇದು ಕರ್ನಾಟಕದ ಗಡಿ ಒಳಗಡೆ ನಿರ್ಮಿಸಲು ಉದ್ದೇಶಿಸಿರುವ ಯೋಜನೆ. ತಮಿಳುನಾಡಿನವರಿಗೆ ಅವರ ಪಾಲಿನ ನೀರನ್ನು ಪಡೆಯಲು ಮಾತ್ರ ಹಕ್ಕಿದೆ. ನಾವು ಪ್ರವಾಹದ ನೀರನ್ನು ಶೇಖರಣೆ ಮಾಡಿಟ್ಟು, ಅದರ ಸದ್ಬಳಕೆ ಮಾಡಿಕೊಂಡರೆ ಅವರಿಗೇನು ತೊಂದರೆ?, ಇದು ಸಮುದ್ರದ ಪಾಲಾಗುತ್ತಿರುವ ಹೆಚ್ಚುವರಿ ನೀರನ್ನು ಸದುಪಯೋಗ ಮಾಡಿಕೊಳ್ಳಲು ರೂಪಿಸಿರುವ ಯೋಜನೆಯಾಗಿದೆ. ಇದನ್ನು ಜಾರಿ ಮಾಡಲು ನಮ್ಮ ರಾಜ್ಯಕ್ಕೆ ಕಾನೂನಾತ್ಮಕವಾಗಿ ಎಲ್ಲಾ ರೀತಿಯ ಹಕ್ಕುಗಳಿವೆ. ಸರ್ವೋಚ್ಚ ನ್ಯಾಯಾಲಯದ ಅಥವಾ ಇತರೆ ಯಾವುದೇ ತಕರಾರುಗಳು ಇಲ್ಲ. ಹೀಗಾಗಿ ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಪರಿಸರ ಇಲಾಖೆಯು ಕೂಡಲೇ ಅನುಮತಿ ಪತ್ರ ನೀಡಬೇಕು ಹಾಗೂ ರಾಜ್ಯ ಸರ್ಕಾರ ಕೂಡಲೇ ಯೋಜನೆ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಡಿಸೆಂಬರ್ ಮೊದಲ ವಾರ ಪಾದಯಾತ್ರೆ
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಡಿಸೆಂಬರ್ ಮೊದಲ ವಾರದಲ್ಲಿ ಮೇಕೆದಾಟುವಿನಿಂದ ಬೆಂಗಳೂರು ನಗರದವರೆಗೆ ಪಾದಯಾತ್ರೆ ನಡೆಸುತ್ತೇವೆ. ಇನ್ನೆರೆಡು ದಿನದಲ್ಲಿ ನಿರ್ಧಿಷ್ಟ ದಿನಾಂಕವನ್ನು ಘೋಷಣೆ ಮಾಡುತ್ತೇವೆ. ಚುನಾವಣೆಗಾಗಿ ಅಥವಾ ಮತ ಗಳಿಕೆಗಾಗಿ ನಾವು ಪಾದಯಾತ್ರೆ ಮಾಡುತ್ತಿಲ್ಲ. ನಮ್ಮ ಸರ್ಕಾರ ಈ ಯೋಜನೆಯನ್ನು ರೂಪಿಸಿ, ಯೋಜನಾ ವರದಿಯನ್ನು ಸಿದ್ಧಪಡಿಸಿತ್ತು. ಕೇಂದ್ರ ಸರ್ಕಾರ ಅನುಮತಿ ನೀಡದ ಕಾರಣಕ್ಕೆ ಯೋಜನೆ ಜಾರಿ ಸಾಧ್ಯವಾಗಿರಲಿಲ್ಲ ಎಂದು ವಿವರಿಸಿದರು.
ಯಾವುದೇ ರಾಜಕೀಯ ಇಲ್ಲ
ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಸಂಬಂಧಿಸಿದಂತೆ ಈ ಹಿಂದೆ ಪಾದಯಾತ್ರೆ ನಡೆಸಿ ನಾವು ಅಧಿಕಾರಕ್ಕೆ ಬಂದರೆ ಸುಮಾರು 50,000 ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ಹೇಳಿದ್ದೆವು. ನಂತರ 2013 ರಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ವಾರ್ಷಿಕ 10 ಸಾವಿರ ಕೋಟಿ ರೂಪಾಯಿಯಂತೆ ಐದು ವರ್ಷಗಳಲ್ಲಿ ರೂ. 50,000 ಕೋಟಿಗೂ ಅಧಿಕ ಹಣವನ್ನು ನೀರಾವರಿ ಉದ್ದೇಶಕ್ಕೆ ಖರ್ಚು ಮಾಡಿದ್ದೆವು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ನಮಗೆ ನಾಡಿನ ರೈತರ ಮತ್ತು ಜನರ ಹಿತ ಮುಖ್ಯ ಎಂದರು.
ಸುದ್ದಿಗೋಷ್ಠಿ ಬಳಿಕ ಮತ್ತೊಂದು ಸಮಾರಂಭದಲ್ಲಿ ಪಾಲ್ಗೊಂಡ ಸಿದ್ದರಾಮಯ್ಯನವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥಾಪನಾ ದಿನದ ಅಂಗವಾಗಿ ಸಂಸ್ಥೆಯ ಧ್ವಜ ಬಿಡುಗಡೆ ಮಾಡಿದರು. ಇದೇ ವೇಳೆ ಸಂಸ್ಥೆ ವತಿಯಿಂದ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಆನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತ ಹಾಗೂ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಶಾಸಕ ಹಾಗೂ ರಾಜ್ಯ ಆಯುಕ್ತ ಮೋಹನ್ ಕೊಂಡಜ್ಜಿ, ಗೈಡ್ಸ್ ವಿಭಾಗದ ಆಯುಕ್ತರಾದ ಗೀತಾ ನಟರಾಜ್ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ: ಬೆಂಗಳೂರು ಅಭಿವೃದ್ಧಿ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ತುರ್ತು ಸಭೆ