ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಮಹಾಮಾರಿ ಅಟ್ಟಹಾಸಕ್ಕೆ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದಾರೆ.
ಬೊಮ್ಮನಹಳ್ಳಿ ವಲಯದ ದೊಡ್ಡಕಲ್ಲಸಂದ್ರದಲ್ಲಿ (39) ವರ್ಷದ ಟ್ಯಾಕ್ಸಿ ಡ್ರೈವರ್ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಇವರು ಹೆಚ್ಐವಿ ಪಾಸಿಟಿವ್ ಕೂಡಾ ಆಗಿದ್ದರು. ಇದಲ್ಲದೆ ಇದೇ ವಲಯದ ಐವರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಡಾ. ಸುರೇಶ್ ಈಟಿವಿ ಭಾರತಕ್ಕೆ ತಿಳಿಸಿದರು.
ಪಶ್ಚಿಮ ವಿಭಾಗದ ಪ್ರಕಾಶನಗರ ವಾರ್ಡಿನ ಜ್ಯುವೆಲ್ಲರಿ ಶಾಪ್ ಓನರ್(33) ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಮಾತ್ರವಲ್ಲ, ಜೊತೆಗೆ (22) ವರ್ಷದ ಯುವತಿಗೆ ಸೋಂಕು ತಗುಲಿದೆ.
ಮರ್ಫಿಟೌನ್ ತರಕಾರಿ ಹಾಗೂ ಮಾಂಸದ ಮಾರುಕಟ್ಟೆ ವ್ಯಾಪಾರಿ (57) ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಮಾರುಕಟ್ಟೆ ಬಂದ್ ಮಾಡಲಾಗಿದ್ದು, 22 ಜನ ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.
ಬನಶಂಕರಿಯಲ್ಲಿ (57) ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಇದಲ್ಲದೆ ನಗರದ ಹಲವೆಡೆ ಕೋವಿಡ್-19 ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ಹೆಚ್ಚಾಗುತ್ತಿದೆ. ಪಾಲಿಕೆ ವೈದ್ಯಾಧಿಕಾರಿಗಳು, ಸಿಬ್ಬಂದಿ ಸಂಪರ್ಕಿತರನ್ನು ಪತ್ತೆಹಚ್ಚಿ ಕ್ವಾರಂಟೈನ್ ಒಳಪಡಿಸಲಾಗಿದೆ ಹಾಗೂ ಈ ಪ್ರದೇಶವನ್ನು ಸೀಲ್ಡೌನ್ ಮಾಡಲಾಗುತ್ತಿದೆ.