ಬೆಂಗಳೂರು: ವೈದ್ಯಕೀಯ ಕಾಲೇಜು ವಿಚಾರದಲ್ಲಿ ಮಾಜಿ ಸಚಿವ ಡಿ.ಕೆ ಶಿಕುಮಾರ್ ವಿರುದ್ಧ ಅನರ್ಹ ಶಾಸಕ ಡಾ.ಸುಧಾಕರ್ ಕಡೆಗೂ ಮೇಲುಗೈ ಸಾಧಿಸಿದ್ದು, ನವೆಂಬರ್ 8 ರಂದು ಚಿಕ್ಕಬಳ್ಳಾಪುರದಲ್ಲಿಯೇ ಕಾಲೇಜು ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣದ ಶಂಕುಸ್ಥಾಪನೆಗೆ ಕಡೆಗೂ ಮುಹೂರ್ತ ನಿಗದಿಯಾಗಿದೆ. ನವೆಂಬರ್ 8 ರ ಮಧ್ಯಾಹ್ನ 3 ಗಂಟೆಗೆ ಚಿಕ್ಕಬಳ್ಳಾಪುರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಸಿಎಂ ಶಂಕುಸ್ಥಾಪನೆ ನೆರವೇರಿಸಲಿದ್ದು, ಅಂದೇ ವಿವಿಧ ಕಾರ್ಯಕ್ರಮಗಳಿಗೂ ಸಿಎಂ ಚಾಲನೆ ನೀಡಲಿದ್ದಾರೆ.
ಸಿದ್ದರಾಮಯ್ಯ ಅವಧಿಯಲ್ಲಿ ಚಿಕ್ಕಬಳ್ಳಾಪುರಕ್ಕೆ ಮಂಜೂರಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜನ್ನು ಮೈತ್ರಿ ಸರ್ಕಾರದ ವೇಳೆ ಅಂದಿನ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ ಶಿವಕುಮಾರ್ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಇದೀಗ ಬಿಜೆಪಿ ಸರ್ಕಾರ ಬಂದ ನಂತರ ಮರಳಿ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜನ್ನು ವರ್ಗಾವಣೆ ಮಾಡಿಸಿಕೊಳ್ಳುವಲ್ಲಿ ಅನರ್ಹ ಶಾಸಕ ಸುಧಾಕರ್ ಸಫಲರಾಗಿದ್ದಾರೆ. ಡಿ.ಕೆ ಶಿವಕುಮಾರ್ ತೀವ್ರ ವಿರೋಧ, ಸವಾಲು, ಹೋರಾಟದ ಎಚ್ಚರಿಕೆ ನಡುವೆಯೂ ತಮ್ಮ ಕ್ಷೇತ್ರದಲ್ಲೇ ಕಾಲೇಜು ಆರಂಭಕ್ಕೆ ಗುದ್ದಲಿಪೂಜೆಗೆ ಸಮಯ ನಿಗದಿಪಡಿಸಿಕೊಳ್ಳುವ ಮೂಲಕ ಹೋರಾಟದಲ್ಲಿ ಅನರ್ಹ ಶಾಸಕ ಸುಧಾರಕ್ ಜಯಗಳಿಸಿದಂತಾಗಿದೆ.
ಡಿಸೆಂಬರ್ 5 ರಂದು 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಕ್ಷೇತ್ರಗಳಿಗೆ ಆಧ್ಯತೆ ನೀಡಿರುವ ಸಿಎಂ, ಅನರ್ಹ ಶಾಸಕ ಎಂ.ಟಿ.ಬಿ ನಾಗರಾಜ್ ಕ್ಷೇತ್ರ ಹೊಸಕೋಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬೆನ್ನಲ್ಲೇ ಅನರ್ಹ ಶಾಸಕ ಬಿ.ಸಿ ಪಾಟೀಲ್ ಪ್ರತಿನಿಧಿಸುವ ಹಿರೇಕೆರೂರಿನಲ್ಲಿ ನಾಳೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದು, ನವೆಂಬರ್ 8 ರಂದು ಚಿಕ್ಕಬಳ್ಳಾಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಅನರ್ಹರ ಕ್ಷೇತ್ರದಲ್ಲಿ ಸಿಎಂ ಭರ್ಜರಿ ಪ್ರಚಾರಕ್ಕೆ ಮುಂದಾಗಿದ್ದಾರೆ.