ಬೆಂಗಳೂರು: ಓಲಾ, ಉಬರ್ ಮತ್ತು ರಾಪಿಡೊ ಕಂಪನಿಗಳ ಆ್ಯಪ್‌ಗಳಲ್ಲಿ ಆಟೊರಿಕ್ಷಾ ಸೇವೆ ನಾಳೆಯಿಂದ ಸ್ಥಗಿತವಾಗಲಿದೆ ಎಂದು ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್ ತಿಳಿಸಿದರು.
ಶಾಂತಿನಗರದ ಸಾರಿಗೆ ಇಲಾಖೆಯಲ್ಲಿ ಓಲಾ ಮತ್ತು ಉಬರ್ ಕಂಪನಿಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಿಯಮದ ಪ್ರಕಾರ ಆಟೊ ಸೇವೆ ಒದಗಿಸಲು ಈ ಕಂಪನಿಗಳಿಗೆ ಅನುಮತಿ ಇಲ್ಲ. ಈ ಸಂಬಂಧ ಸಭೆಯಲ್ಲಿ ಸಂಸ್ಥೆಗಳಿಗೆ ಮನವರಿಕೆ ಮಾಡಿ ಕೊಡಲಾಗಿದೆ. ಸಂಸ್ಥೆಗಳಿಗೆ ಆಟೊ ಸೇವೆಯನ್ನು ಆಪ್‌ನಿಂದ ತೆಗೆಯಲು ಸೂಚಿಸಲಾಗಿದೆ. ಒಂದು ವೇಳೆ, ಸೂಚನೆ ಪಾಲಿಸದೇ ಇದ್ದರೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಸ್ತೆಗಿಳಿದರೆ ದಂಡ ಪ್ರಯೋಗ: ನಾಳೆಯಿಂದ ಓಲಾ, ಉಬರ್, ರಾಪಿಡೋಗಳ ಆಟೊ ಸೇವೆ ಸ್ಥಗಿತವಾಗಲಿದೆ. ಪರವಾನಗಿ ಪಡೆದ ಬಳಿಕವಷ್ಟೇ ಆಟೋಗಳನ್ನು ಚಲಾಯಿಸಬಹುದು. ಅದೂ ಕೂಡಾ ಸಾರಿಗೆ ಇಲಾಖೆ ನಿಗದಿ ಪಡಿಸಿದ ದರದಲ್ಲೇ ಆಟೊ ಓಡಿಸಬೇಕೆಂಬ ನಿಯಮ ಹಾಕಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಆಟೊ ಓಡಿಸಿದರೆ ಓಲಾ, ಊಬರ್ ಸಂಸ್ಥೆಗೆ 5 ಸಾವಿರ ದಂಡ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಆಟೊ ಸೇವೆ ಕಾನೂನು ಬಾಹಿರವಾಗಿದೆ. ಹೀಗಾಗಿ ಆಟೊ ಚಾಲಕರು ಮತ್ತು ಪ್ರಯಾಣಿಕರು ಈ ಸೇವೆ ಬಳಕೆ ಮಾಡಬಾರದು ಎಂದು ಮನವಿ ಮಾಡಿದರು. ಬಳಕೆ ಮಾಡಿ ತೊಂದರೆ ಅನುಭವಿಸಿದರೆ ಅದಕ್ಕೆ ಇಲಾಖೆ ಜವಾಬ್ದಾರಿ ಆಗುವುದಿಲ್ಲ ಎಂಬ ಪ್ರಕಟಣೆ ಹೊರಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಒಂದು ವೇಳೆ ಆಟೊ ಸೇವೆ ಕೋರಿ ಕಂಪನಿಗಳು ಅರ್ಜಿ ಸಲ್ಲಿಸಿದರೆ ಅದನ್ನು ಸರ್ಕಾರಕ್ಕೆ ರವಾನಿಸಲಾಗುವುದು. ಬಳಿಕ ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಇಡೀ ಆ್ಯಪ್ ರದ್ದುಗೊಳಿಸಲು ಸಾಧ್ಯವಿಲ್ಲ: ಇಡೀ ಆ್ಯಪ್ ರದ್ದುಗೊಳಿಸಲು ಸಾಧ್ಯವಿಲ್ಲ. ಒಂದೂವರೆ ವರ್ಷದಿಂದ ಕಂಪನಿಗಳ ಪರವಾನಗಿ ನವೀಕರಣಗೊಂಡಿಲ್ಲ. ಈ ಸಂಬಂಧ ಹೈ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಈಗ ಇಡೀ ಆ್ಯಪ್ ರದ್ದು ಕಷ್ಟ ಎಂದು ಕಂಪನಿ ಪ್ರತಿನಿಧಿಗಳು ತಿಳಿಸಿದ್ದಾರೆ. ಆ್ಯಪ್‌ನಲ್ಲಿ ಆಟೊ ಸೇವೆ ನೀಡುವ ಸಂಬಂಧ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದು ಕಂಪನಿಗಳು ತಿಳಿಸಿವೆ.
ಸಾರ್ವಜನಿಕರು ದೂರು ಸಲ್ಲಿಸಬಹುದು: ಓಲಾ, ಉಬರ್ ಆಟೋ ಓಡಿಸಿದರೆ ಸಾರ್ವಜನಿಕರು ನೇರವಾಗಿ ದೂರು ನೀಡಬಹುದು. ಸಾರಿಗೆ ಇಲಾಖೆಗೆ ಕರೆ ಮಾಡಿ ದೂರು ನೀಡಬಹುದು ಎಂದು ತಿಳಿಸಿದ್ದಾರೆ. 9449863429/426ಗೆ ದೂರವಾಣಿ ಕರೆ ಮಾಡಿ ದೂರು ನೀಡಬಹುದಾಗಿದೆ. ದೂರು ನೀಡಲು RTO ನಿಂದ ವಾಟ್ಸ್ಆ್ಯಪ್ ಗ್ರೂಪ್ ರಚನೆ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ : ಹೆಚ್ಚಿನ ದರ ವಸೂಲಿ: ಓಲಾ, ಉಬರ್ ಆಟೋರಿಕ್ಷಾ ಸಂಚಾರ ತಕ್ಷಣ ಸ್ಥಗಿತಕ್ಕೆ ಸಾರಿಗೆ ಇಲಾಖೆ ಆದೇಶ