ಬೆಂಗಳೂರು: ಓಲಾ, ಉಬರ್‌ಗಳಲ್ಲಿ ಆಟೋ ಬಳಕೆಗೆ ಸಂಬಂಧಿಸಿದಂತೆ ಸರ್ಕಾರ ದರ ನಿಗದಿ ಮಾಡಿ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ಆ್ಯಪ್ ಆಧಾರಿತ ಸೇವೆಗಳನ್ನು ಆಟೋ ರಿಕ್ಷಾಗಳನ್ನು ಬಳಕೆ ಮಾಡದಂತೆ ಈ ಹಿಂದೆ ಸಲ್ಲಿಸಿರುವ ಅರ್ಜಿ ವಿಚಾರಣಾ ಹಂತದಲ್ಲಿದೆ. ಈ ನಡುವೆ ಅಗ್ರಿಗೇಟರ್ ಸಂಸ್ಥೆಗಳಾದ ಓಲಾ ಮತ್ತು ಉಬರ್ ಮತ್ತೊಂದು ಅರ್ಜಿ ಸಲ್ಲಿಸಿವೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.
ಆ್ಯಪ್ ಆಧಾರಿತ ಅಗ್ರಿಗೇಟರ್‌ಗಳಲ್ಲಿ ಆಟೋ ಬಳಕೆ ಮಾಡುವುದಕ್ಕೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿತ್ತು. ಈ ವಿಷಯದ ಕುರಿತು ಹೈಕೋರ್ಟ್ ಮಧ್ಯ ಪ್ರವೇಶದ ಬಳಿಕ ಮೊಬೈಲ್ ಆ್ಯಪ್ ಆಧಾರಿತ ಅಗ್ರಿಗೇಟರ್‌ಗಳಲ್ಲಿ ಆಟೋಗಳ ಬಳಕೆಗೆ ಸಂಬಂಧಿಸಿದಂತೆ ಸರ್ಕಾರ ನಿಗದಿ ಪಡಿಸಿರುವ ಪ್ರಯಾಣ ಶುಲ್ಕಕ್ಕೆ ಶೇ.5ರಷ್ಟು ಹೆಚ್ಚುವರಿಯಾಗಿ ಸೇವಾ ಶುಲ್ಕ ಪಡೆದುಕೊಳ್ಳಬಹುದು ಎಂದು ಅಧಿಸೂಚನೆ ಹೊರಡಿಸಿತ್ತು.
ಇದನ್ನು ಪ್ರಶ್ನಿಸಿ ಅಗ್ರಿಗೇಟರ್ಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ, ಶೇ.20 ರಷ್ಟು ಸೇವಾ ಶುಲ್ಕ ವಿಧಿಸಬಹುದು ಎಂಬ ನಿಯಮವಿದೆ. ಆದರೆ, ರಾಜ್ಯ ಸರ್ಕಾರ ಕೇವಲ ಶೇ.5ರಷ್ಟು ಮಾತ್ರ ಸೇವಾ ಶುಲ್ಕ ನಿಗದಿ ಪಡಿಸಿದೆ. ಹೀಗಿದ್ದರೂ, ಅಗ್ರಿಗೇಟರ್‌ಗಳು ನಷ್ಟ ಅನುಭವಿಸುತ್ತಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ರಾಜ್ಯ ಸರ್ಕಾರ ಸಲಹೆ ಮತ್ತು ನಿಯಮಗಳನ್ನು ರೂಪಿಸಬಹುದಾಗಿದೆ. ಆದರೆ, ದರ ನಿಗದಿ ಪಡಿಸುವ ಅಧಿಕಾರವಿಲ್ಲ. ಹೀಗಾಗಿ ರಾಜ್ಯ ಸರ್ಕಾರ ನಿಗದಿ ಪಡಿಸಿರುವ ಶುಲ್ಕವನ್ನು ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಕೇಳಲಾಗಿದೆ. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಸಾರಿಗೆ ವ್ಯವಸ್ಥೆ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದೆ. ಹೀಗಾಗಿ ರಾಜ್ಯ ಸರ್ಕಾರ ದರ ನಿಗದಿ ಮಾಡುವುದಕ್ಕೆ ಅವಕಾಶವಿದೆ. ಪ್ರಯಾಣಿಕರ ಅನುಕೂಲತೆ, ಜನದಟ್ಟಣೆ ಮತ್ತು ರಸ್ತೆ ಸುರಕ್ಷತೆಯ ದೃಷ್ಠಿಯಿಂದ ಬೆಲೆ ನಿಗದಿ ಮಾಡಲಾಗಿದೆ ಎಂದು ವಾದ ಮಂಡಿಸಿದರು.
ಇದನ್ನೂ ಓದಿ: ಬಜೆಟ್ ವರ್ಷದ 9 ತಿಂಗಳು ಕಳೆದರೂ ಇಲಾಖಾವಾರು ಆರ್ಥಿಕ ಪ್ರಗತಿ ಬರೇ 44%!