ಬೆಂಗಳೂರು: ನಗರದಲ್ಲಿ ಎಲ್ಲಾ ಬಗೆಯ ವಾಣಿಜ್ಯ ಜಾಹೀರಾತುಗಳಿಗೆ 2018ರಲ್ಲಿ ಹೈಕೋರ್ಟ್ ನಿಷೇಧ ಹೇರಿದ್ದು, ಪಿಪಿಪಿ ಮಾದರಿಯಲ್ಲಿ ನಿರ್ಮಿಸಿದ ಪಾದಚಾರಿ ಮೇಲ್ಸೇತುವೆ, ಬಸ್ ಶೆಲ್ಟರ್ ಹಾಗೂ ಕೆಲ ಶೌಚಾಲಯ, ಪೊಲೀಸ್ ಚೌಕಿಗಳಲ್ಲಿ ಮಾತ್ರ ಅಧಿಕೃತವಾಗಿ ಶುಲ್ಕ ಪಾವತಿಸಿ ಜಾಹೀರಾತು ಪ್ರದರ್ಶಿಸಲು ಅವಕಾಶ ಇದೆ.
ಬಿಬಿಎಂಪಿಯಲ್ಲಿ ಔಟ್ ಡೋರ್ ಸೈನೇಜ್ ಅಂಡ್ ಪಬ್ಲಿಕ್ ಮೆಸೇಜಿಂಗ್ ಬೈಲಾ-2018 ಜಾರಿಯಲ್ಲಿದೆ. ಹೀಗಿದ್ದರೂ ಸಾಲು ಸಾಲು ಹಬ್ಬಗಳು ಬಂದರೂ ಜಾಹೀರಾತು ಪ್ರದರ್ಶನಕ್ಕೆ ಪೈಪೋಟಿಯೇ ಕಂಡುಬಂದಿಲ್ಲ. ಲಾಕ್ಡೌನ್ನಿಂದ ನಷ್ಟಕ್ಕೊಳಗಾಗಿರುವ ಉದ್ಯಮಗಳು ಹಬ್ಬದ ಸಮಯದಲ್ಲಿ ಕೊಂಚ ಮಟ್ಟಿಗೆ ಚೇತರಿಸಿಕೊಳ್ಳುತ್ತಿವೆ. ಹೀಗಾಗಿ ಹಲವು ಪ್ರಮುಖ ರಸ್ತೆಯ ಬಸ್ ತಂಗುದಾಣಗಳು ಜಾಹೀರಾತುಗಳು ಇಲ್ಲದೆ ಖಾಲಿ ಬಿದ್ದಿವೆ.
ಅನಧಿಕೃತ ಜಾಹೀರಾತು ತೆರವಿಗೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬರುತ್ತಿದ್ದು, ಅಲ್ಲಲ್ಲಿ ಫ್ಲೆಕ್ಸ್ ಅಳವಡಿಕೆ, ಗೋಡೆ ಬರಹದ ಮೂಲಕ ಜಾಹೀರಾತು ಪ್ರದರ್ಶನ ಇನ್ನೂ ನಡೆಯುತ್ತಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಎಫ್ಐಆರ್ ದಾಖಲಿಸುವ ಅಧಿಕಾರ ಇದ್ದರೂ ವಲಯವಾರು ಅಧಿಕಾರಿಗಳು, ಜಂಟಿ ಆಯುಕ್ತರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಪಾಲಿಕೆ ಕೇಂದ್ರ ಕಚೇರಿಯಲ್ಲೂ ಈ ಬಗ್ಗೆ ಮಾಹಿತಿ ಲಭ್ಯವಿಲ್ಲ ಎನ್ನಲಾಗುತ್ತಿದೆ.
ಕೋವಿಡ್ ಜಾಹೀರಾತು ತೆರವು: ಈಚೆಗೆ ನಗರದಲ್ಲಿ ಕೋವಿಡ್ ಕುರಿತು ಜನಜಾಗೃತಿ ಮೂಡಿಸಲು ಷರತ್ತುಗಳೊಂದಿಗೆ ಫ್ಲೆಕ್ಸ್ ಅಳವಡಿಸಲು ಹೈಕೋರ್ಟ್ ಸಮ್ಮತಿಸಿತ್ತು. ಆದರೆ ನಿಯಮ ಉಲ್ಲಂಘಿಸಿ ಖಾಸಗಿ ಕಂಪನಿಗಳ ಸ್ಪಾನ್ಸರ್ ಪಡೆದು ಕೋವಿಡ್ ಜಾಗೃತಿ ಫ್ಲೆಕ್ಸ್ಗಳಲ್ಲಿ ಖಾಸಗಿ ಕಂಪನಿಗಳ ಜಾಹೀರಾತು ನೀಡಲಾಗಿತ್ತು. ಇದನ್ನು ಗಮನಿಸಿದ ಹೈಕೋರ್ಟ್, ಪಾಲಿಕೆಗೆ ಅವುಗಳನ್ನು ತೆರವು ಮಾಡುವಂತೆ ಚಾಟಿ ಬೀಸಿತ್ತು. ಹೈಕೋರ್ಟ್ಗೆ ಲೆಕ್ಕ ಕೊಡಬೇಕಾದ ಹಿನ್ನೆಲೆ ಒಟ್ಟು 208 ಸ್ಥಳಗಳಲ್ಲಿದ್ದ ಅನಧಿಕೃತ 297 ಬ್ಯಾನರ್, ಹೋರ್ಡಿಂಗ್ಸ್ಗಳ ಪೈಕಿ ಸರ್ಕಾರದ ಆರೋಗ್ಯ ಇಲಾಖೆ 236 ಕಡೆ ತೆರವುಗೊಳಿಸಿದೆ. ಬಿಬಿಎಂಪಿ ಸರ್ವೇ ಮಾಡಿ 61 ಕಡೆ ತೆರವು ಮಾಡಲಾಗಿದೆ ಎಂದು ಲೆಕ್ಕ ನೀಡಿದೆ.
ಎಚ್ಚೆತ್ತುಕೊಳ್ಳದ ಪಾಲಿಕೆ: ಹೈಕೋರ್ಟ್ ಅನೇಕ ಬಾರಿ ಚಾಟಿ ಬೀಸಿದರೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಆರೋಪಿಸಿದ್ದಾರೆ. ದೀಪಾವಳಿ ಶುಭಾಶಯ ಕೋರಿದ ಫ್ಲೆಕ್ಸ್, ಬ್ಯಾನರ್ಗಳು ನಗರಾದ್ಯಂತ ರಾರಾಜಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಆಯುಕ್ತರ ಸುತ್ತೋಲೆಗಳಿಗೂ ಬೆಲೆ ಇಲ್ಲದೆ ಕಡೆಗಣಿಸುತ್ತಿದ್ದಾರೆ. ಇದನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದರು.
ಜಾಹೀರಾತು ಅಳವಡಿಸುತ್ತಿದ್ದ ಕಬ್ಬಿಣದ ಚೌಕಟ್ಟುಗಳ ತೆರವಿಗೂ ಗಡುವು ನೀಡಿದ್ದರೂ ಅಧಿಕಾರಿಗಳು ಈ ಬಗ್ಗೆ ಕಾರ್ಯಪ್ರವೃತ್ತರಾಗಿಲ್ಲ. ಇತ್ತ ಜಾಹೀರಾತು ಬ್ಯಾನರ್ ಹಾಕುವವರ ವಿರುದ್ಧ ಪ್ರಕರಣ ದಾಖಲಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಈ ಬಗ್ಗೆ ಹೈಕೋರ್ಟ್ ಬಿಬಿಎಂಪಿಗೆ ಕಿವಿ ಹಿಂಡುವ ಸಾಧ್ಯತೆ ಇದೆ.