ಬೆಂಗಳೂರು: ರಾಜ್ಯದಲ್ಲಿ ಸ್ಮಶಾನಕ್ಕಾಗಿ ಜಮೀನನ್ನು ಖಾಸಗಿಯವರಿಂದ ಖರೀದಿಸಿ ಕಾಯ್ದಿರಿಸಲು ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲು ಡಿಸಿಗಳಿಗೆ ಕಂದಾಯ ಇಲಾಖೆ ಸೂಚನೆ ನೀಡಿದೆ. ಈ ಸಂಬಂಧ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್ಲಾ ಡಿಸಿಗಳಿಗೆ ಸೂಚನೆ ನೀಡಿದ್ದಾರೆ.
ಪತ್ರದಲ್ಲಿ 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ಸಾರ್ವಜನಿಕ ಸ್ಮಶಾನ ಸೌಲಭ್ಯ ಕಲ್ಪಿಸುವ ಸಲುವಾಗಿ ಸರ್ಕಾರಿ ಜಮೀನು ಲಭ್ಯವಿಲ್ಲದ ಗ್ರಾಮಗಳಲ್ಲಿ ಖಾಸಗಿ ಭೂ ಮಾಲೀಕರಿಂದ ಅಗತ್ಯ ಜಮೀನನ್ನು ಖರೀದಿಸಿ ಸ್ಮಶಾನಕ್ಕಾಗಿ ಕಾಯ್ದಿರಿಸಲು ರೂ. 6 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ ಎಂದು ತಿಳಿಸಿದೆ.
ಹೈ ಕೋರ್ಟ್ 2019ರಲ್ಲಿ ನೀಡಿದ ಆದೇಶವನ್ನು ಅನುಷ್ಠಾನಗೊಳಿಸಬೇಕಾಗಿರುತ್ತದೆ. ಆದ್ದರಿಂದ, ರಾಜ್ಯದಲ್ಲಿ ಸಾರ್ವಜನಿಕ ಸ್ಮಶಾನ ಸೌಲಭ್ಯ ಕಲ್ಪಿಸುವ ಉದ್ದೇಶಕ್ಕಾಗಿ ಸರ್ಕಾರಿ ಜಮೀನು ಲಭ್ಯವಿಲ್ಲದ ಗ್ರಾಮಗಳಲ್ಲಿ ಖಾಸಗಿ ಭೂ ಮಾಲೀಕರಿಂದ ಅಗತ್ಯ ಜಮೀನನ್ನು ಖರೀದಿಸಲು ಅನುದಾನ ಕೋರಿ ಕೂಡಲೇ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
ಇತ್ತೀಚೆಗೆ ಹೈಕೋರ್ಟ್ ಆದೇಶ ಪಾಲಿಸದೇ ಇದ್ದುದಕ್ಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಸುಮಾರು 974 ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯವೇ ಇಲ್ಲದಿರುವುದು ಬೆಳಕಿಗೆ ಬಂದಿತ್ತು. ಇದೀಗ ಸರ್ಕಾರ ಸ್ಮಶಾನಕ್ಕಾಗಿ ಜಮೀನನ್ನು ಖಾಸಗಿಯವರಿಂದ ಖರೀದಿಸಿ ಕಾಯ್ದಿರಿಸಲು ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲು ಡಿಸಿಗಳಿಗೆ ಸೂಚನೆ ನೀಡಿದೆ.
ಇದನ್ನೂ ಓದಿ : UPSC ಪರೀಕ್ಷೆ ಪಾಸ್ ಆಗಲಿಲ್ಲ, ನೋಡೋಕೆ ಚೆನ್ನಾಗಿಲ್ಲ ಅಂತಾ ನೆಪ.. ವಿಚ್ಛೇದನಕ್ಕೆ ಮುಂದಾದ ಪತಿ!