ಆನೇಕಲ್ (ಬೆಂಗಳೂರು) : ಗಂಡನಿಂದ ನನಗೆ ಸುಖ, ನೆಮ್ಮದಿ ಸಿಗುತ್ತಿಲ್ಲ ಎಂದು 21 ವರ್ಷದ ವಿವಾಹಿತ ಮಹಿಳೆಯೊಬ್ಬರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮನೆಯವರು ನೋಡಿದ ಹುಡುಗನನ್ನು ಮದುವೆಯಾದ ಈ ಯುವತಿ, ತನ್ನ ಸಂಸಾರದ ಕನಸುಗಳೆಲ್ಲ ಬಾಡಿಹೋಗಿದೆ ಎಂದು ದೂರಿನಲ್ಲಿ ಬೇಸರ ತೋಡಿಕೊಂಡಿದ್ದಾರೆ.
ಪ್ರಕರಣದ ವಿವರ: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಂಡ್ಯ ಮೂಲದ ಯುವತಿ, ಹಾಸನ ಮೂಲದ ಯುವಕನಿಗೆ ಒಂದು ವರ್ಷದ ಹಿಂದೆ ಮದುವೆ ಆಗಿತ್ತು. ಹುಡುಗ ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್‌ಮೆಂಟ್ ಸೆಕ್ಯುರಿಟಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದಾನೆ. ಆದರೆ ಆತ ತನ್ನ ಜೊತೆಗೆ ದೈಹಿಕ ಸಂಪರ್ಕ ಹೊಂದಿರದ ಕುರಿತು ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ. ಕನಿಷ್ಟ ಪ್ರೀತಿಯಿಂದ ಮಾತನಾಡಿಸಿದರೂ ಚಿಕ್ಕ ವಿಚಾರಗಳಿಗೆ ಖ್ಯಾತೆ ತೆಗೆದು ಜಗಳಕ್ಕೆ ಇಳಿಯುತ್ತಾನೆ ಎಂದು ಪತಿ ವಿರುದ್ದ ದೂರಿದ್ದಾರೆ.
ಮನೆಯವರು ನೋಡಿದ ಹುಡುಗನೊಂದಿಗೆ 2022ರ ಜೂನ್ 6ರಂದು ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಲಾಗಿದೆ. ಈ ಸಂದರ್ಭದಲ್ಲಿ 10 ಗ್ರಾಂ ಚಿನ್ನದ ಸರ, 50,000 ನಗದನ್ನು ವರದಕ್ಷಿಣೆಯಾಗಿ ನೀಡಲಾಗಿದೆ. ಬಳಿಕ ಆನೇಕಲ್ ತಾಲೂಕಿನ ಎಲೆಕ್ಟ್ರಾನಿಕ್ ಸಿಟಿಯ ಗೋವಿಂದಶೆಟ್ಟಿ ಪಾಳ್ಯದಲ್ಲಿ ದಂಪತಿ ವಾಸವಿದ್ದರು. ಆದರೆ ಪತಿಯು ಪತ್ನಿಯ ಜೊತೆ ದೈಹಿಕ ಸಂಪರ್ಕ ಬೆಳೆಸದ ಬಗ್ಗೆ ಇಬ್ಬರ ನಡುವೆ ಜಗಳವಾಗಿದೆ. ಒಮ್ಮೆ ತಾನು ತಾಯಿಯೊಂದಿಗೆ ಕೋಟಿಲಿಂಗೇಶ್ವರ ದೇವಾಲಯಕ್ಕೆ ಹೋಗಿ ಬಂದಾಗ ಪತಿ ಅವ್ಯಾಚ್ಯ ಶಭ್ದಗಳಿಂದ ನಿಂದಿಸಿ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಪತಿಯನ್ನು ಠಾಣೆಗೆ ಕರೆಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಮಹಿಳೆಯು ಉಲ್ಲೇಖಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೊತೆಗೆ ವಿಚ್ಛೇದನ ಕೋರಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರೂ ಪತಿ ಅದಕ್ಕೆ ಒಪ್ಪುತ್ತಿಲ್ಲ. ಇದರಿಂದ ಒಂದೆಡೆ ಬಾಳಲೂ ಆಗದೇ ದೂರ ಹೋಗಲೂ ಆಗದ ತ್ರಿಶಂಕು ಸ್ಥಿತಿಯಲ್ಲಿ ಇದ್ದೇನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಗಂಡನಿಂದ ನ್ಯಾಯ ಬೇಕು ಎಂದು ಮಹಿಳೆ ಪರಪ್ಪನ ಅಗ್ರಹಾರ ಪೊಲೀಸರಿಗೆ ದೂರು ನೀಡಿದ್ದು, ಪತಿಯ ವಿರುದ್ಧ ಕ್ರಮ ಕೈಗೊಂಡು ಸೂಕ್ತ ನಿರ್ಧಾರಕ್ಕೆ ಬರುವಂತೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಪತಿಯ ವಿಚಿತ್ರ ವರ್ತನೆಯಿಂದ ಬೇಸತ್ತ ಪತ್ನಿ; ಕೇಸು ದಾಖಲು : ಮಹಿಳೆಯರ ಉಡುಪು ಧರಿಸಿ ವಿಚಿತ್ರ ವರ್ತನೆ ತೋರುತ್ತಿದ್ದ ಆರೋಪದ ಮೇಲೆ ಪತಿಯ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ನನ್ನ ಪತಿ ಲಿಪ್ಸ್ಟಿಕ್ ಹಾಕಿ ಮಹಿಳೆಯರ ಒಳ ಉಡುಪು ಧರಿಸುತ್ತಿದ್ದರು ಎಂದು ಆರೋಪಿಸಿ ಪತ್ನಿಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಮಹಿಳೆಯರ ಉಡುಪು ಧರಿಸಿ ವಿಚಿತ್ರವಾಗಿ ವರ್ತಿಸುವುದಲ್ಲದೇ ವರದಕ್ಷಿಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗಂಡ ಹಾಗೂ ಆತನ ಮನೆಯವರ ವಿರುದ್ಧ ಹೆಂಡತಿ ದೂರು ನೀಡಿದ್ದರು. ಈ ಸಂಬಂಧ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಇದನ್ನೂ ಓದಿ : Belagavi Crime: ಕುಡಿತದಿಂದ ಕೌಟುಂಬಿಕ ಕಲಹ.. ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ