ಬೆಂಗಳೂರು: ಕಾವೇರಿ ವಿಚಾರವಾಗಿ ಕರ್ನಾಟಕ ಬಂದ್ಗೆ ಅವಕಾಶ ಇಲ್ಲ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ನಾನು ಪ್ರತಿಭಟನಾಕಾರರಿಗೆ ಅಡ್ಡಿ ಮಾಡಲ್ಲ. ಸುಪ್ರಿಂ ಕೋರ್ಟ್ ಬಂದ್ ಮಾಡಬಾರದು ಅಂತ ಹೇಳಿದೆ. ಜವಾಬ್ದಾರಿ ಇರುವವರು ಅರಿತುಕೊಳ್ತಾರೆ. ನಾವು ಸಾರ್ವಜನಿಕರನ್ನು ರಕ್ಷಣೆ ಮಾಡಲೇಬೇಕು. ನಾವು ಜನತೆಗೆ ರಕ್ಷಣೆ ಕೊಟ್ಟೇ ಕೊಡುತ್ತೇವೆ. ಬಂದ್ ಮಾಡಲು ಅವಕಾಶ ಇಲ್ಲ. ರಾಜ್ಯದ ಹಿತರಕ್ಷಣೆ ಕಾಪಾಡಬೇಕು. ನಾಳೆ ಪ್ರತಿಭಟನೆ ಮಾಡಿ. ಆದರೆ ಬಂದ್ ಬೇಡ ಎಂದು ಮನವಿ ಮಾಡಿದರು.
ನಾಳೆ CWMA ಮೀಟಿಂಗ್ ಇದೆ. ನಮ್ಮ ಅಧಿಕಾರಿಗಳಿಗೆ ಸಭೆಗೆ ಹಾಜರಾಗಲು ಹೇಳಿದ್ದೇವೆ. ವರ್ಚುವಲ್ ಮೂಲಕ ಸಭೆಗೆ ಹಾಜರಾಗುವುದು ಬೇಡ ಅಂದಿದ್ದೇವೆ. ನೀವೆ ಖುದ್ದು ಹಾಜರಾಗಿ ಅಂತ ಹೇಳಿದ್ದೇವೆ. ಈ ಸಂಬಂಧ ಕಾನೂನು ತಜ್ಞರು, ಹಿರಿಯರ ಸಭೆ ಮಾಡುತ್ತೇವೆ. ಈಗ ಎರಡು ಸಾವಿರ ಕ್ಯೂಸೆಕ್ ನೀರು ಹೋಗುತ್ತಿರಬಹುದು. ನಾಳೆ ತೀರ್ಪು ನೋಡಿಕೊಂಡು ಕೋರ್ಟ್‌ಗೆ ಹೋಗ್ತೇವೆ ಎಂದರು.
ಮೈತ್ರಿಯಿಂದಾಗಿ ಬಹಳ ಜನ ಬರುವವರಿದ್ದಾರೆ: ಬಿಜೆಪಿ- ಜೆಡಿಎಸ್ ಮೈತ್ರಿ ಹಿನ್ನೆಲೆ ಬಹಳಷ್ಟು ಮುಖಂಡರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಮೈತ್ರಿಯಿಂದ ಹಲವರಲ್ಲಿ ಆಕ್ರೋಶ ಇದೆ. ಈ ಬಗ್ಗೆ ನಾನು ಸಿಎಂ ಬಳಿ ಮಾತನಾಡುತ್ತೇನೆ. ನಮ್ಮ ಪಕ್ಷದವರ ಜೊತೆ ಮಾತನಾಡುತ್ತೇವೆ ಎಂದರು.
ಬಿ.ಕೆ. ಹರಿಪ್ರಸಾದ್, ಮುನಿಯಪ್ಪ ಡಿಕೆಶಿ ಭೇಟಿ: ಸದಾಶಿವನಗರ ಡಿಸಿಎಂ ಡಿಕೆಶಿ ನಿವಾಸಕ್ಕೆ ತೆರಳಿದ ಕೆ.ಹೆಚ್ ಮುನಿಯಪ್ಪ ಹಾಗೂ ಬಿ.ಕೆ. ಹರಿಪ್ರಸಾದ್ ಚರ್ಚೆ ನಡೆಸಿದರು. ಪ್ರಮುಖವಾಗಿ ನಿಗಮ ಮಂಡಳಿ ನೇಮಕಾತಿ ಹಾಗೂ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಸಂಬಂಧವೂ ಚರ್ಚೆ ನಡೆಸಿದ್ದಾರೆ.
ಭೇಟಿ ಬಳಿಕ ಮಾತನಾಡಿದ ಕೆ.ಹೆಚ್. ಮುನಿಯಪ್ಪ, ಹರಿಪ್ರಸಾದ್ ನನಗಿಂತ ಮುಂಚೆ ಬಂದು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ರು. ಅವರ ಸ್ಥಾನಮಾನ ವಿಚಾರ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಬೋರ್ಡ್ ಮತ್ತು ಕಾರ್ಪೊರೇಷನ್ ನೇಮಕಾತಿ ಬೇಗ ಮಾಡಲು ಮನವಿ ಮಾಡಿದ್ದೇವೆ. ಕಾರ್ಯಕರ್ತರಿಗೆ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಪರಿಶೀಲನೆ ಮಾಡುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ ಎಂದರು.
ಮುಂದಿನ ತಿಂಗಳು 10 ಕೆ.ಜಿ. ಅಕ್ಕಿ: ಮುಂದಿನ ತಿಂಗಳಿನಿಂದ ಹತ್ತು ಕೆಜಿ ಅಕ್ಕಿ ನೀಡುತ್ತೇವೆ ಎಂದು ಇದೇ ವೇಳೆ ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ತಿಳಿಸಿದರು. ಟೆಂಡರ್ ಪ್ರಕ್ರಿಯೆ ನಡೆದಿದೆ. ಬರಗಾಲದ ತಾಲೂಕಿನಲ್ಲಿ ಹಣದ ಬದಲು ಅಕ್ಕಿ ಕೊಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ : ನಾಳೆ ಕರ್ನಾಟಕ ಬಂದ್.. ಇಂದು ಮಧ್ಯರಾತ್ರಿಯಿಂದಲೇ ಬೆಂಗಳೂರಲ್ಲಿ 144 ಸೆಕ್ಷನ್ ಜಾರಿ