ಬೆಂಗಳೂರು : ಶಬ್ದ ಮಾಲಿನ್ಯ ನಿಯಂತ್ರಣ ಹಿನ್ನೆಲೆಯಲ್ಲಿ ರಾಜ್ಯದ ಪೊಲೀಸ್ ಠಾಣೆಗಳಿಗೆ ಎಷ್ಟು ಮಾಲಿನ್ಯ ಅಳೆಯುವ ಮಾಪಕಗಳ ಅಗತ್ಯವಿದೆ ಎಂಬ ಕುರಿತು ಹೊಸ ಪ್ರಮಾಣಪತ್ರ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಓಕ ನೇತೃತ್ವದ ವಿಭಾಗೀಯಪೀಠ ನಿರ್ದೇಶಿಸಿದೆ.
ರಾಜ್ಯದಲ್ಲಿ ಶಬ್ದ ಮಾಲಿನ್ಯ ತಡೆಗಟ್ಟಲು ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡುವಂತೆ ಕೋರಿ ಇಂದಿರಾನಗರ ನಿವಾಸಿಗಳ ಸಂಘ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಾದಿಸಿದ ವಕೀಲರು, ನ್ಯಾಯಾಲಯದ ಆದೇಶದಂತೆ ಶಬ್ದ ಮಾಲಿನ್ಯ ಅಳೆಯುವ ಮಾಪಕಗಳನ್ನು ಸರ್ಕಾರ ಖರೀದಿಸಲಿದೆ. ಆದರೆ, ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಒಮ್ಮೆಲೆ ಎಲ್ಲವನ್ನೂ ಖರೀದಿಸಲಾಗದು, ಹಂತ ಹಂತವಾಗಿ ಖರೀದಿಸುವ ಕುರಿತು ಡಿಜಿಪಿ ಹೊಸದಾಗಿ ಪ್ರಮಾಣಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಪ್ರತಿ ಪೊಲೀಸ್ ಠಾಣೆಗೆ ಕನಿಷ್ಠ ಎರಡು ಶಬ್ದ ಮಾಲಿನ್ಯ ಅಳೆಯುವ ಮಾಪಕಗಳ ಅಗತ್ಯವಿದೆ. ಆದರೆ, ಕಳೆದ ವಿಚಾರಣೆ ವೇಳೆ ಡಿಜಿಪಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಒಂದು ಪೊಲೀಸ್ ಠಾಣೆಗೆ ಒಂದೇ ಮಾಪಕ ಸಾಕು ಎಂದಿದ್ದಾರೆ. ಇದೀಗ ಬೆಂಗಳೂರು ನಗರದಲ್ಲಿನ 110 ಠಾಣೆಗಳಿಗೆ ಹಾಗೂ ರಾಜ್ಯದ ಇತರೆ ಭಾಗದ 248 ಠಾಣೆಗಳಿಗೆ ತಲಾ ಒಂದೊಂದು ಮಾಪಕ ಖರೀದಿಸಲಾಗುವುದು ಎಂದು ಹೇಳಲಾಗಿದೆ. ವಾಸ್ತವವಾಗಿ ಇಷ್ಟು ಮಾಪಕಗಳು ಸಾಕಾಗುವುದಿಲ್ಲ. ಒಂದು ವೇಳೆ ಇರುವ ಒಂದೇ ಮಾಪಕ ಕೆಟ್ಟು ಹೋದರೆ ಮಾಡುವುದೇನು? ಹಾಗೆಯೇ, ಒಮ್ಮೆಗೆ ಹೆಚ್ಚು ದೂರುಗಳು ಬಂದರೆ ಪರಿಶೀಲಿಸಲು ಮಾಪಕವಿಲ್ಲದಿದ್ದರೆ ಹೇಗೆ ಎಂಬ ಬಗ್ಗೆ ಯೋಚಿಸಿ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ ಎಂದಿತು.
ಇದನ್ನೂ ಓದಿರಿ: Tokyo Olympics: ಕ್ರೀಡಾಪಟುಗಳೊಂದಿಗೆ ನಮೋ ಮಾತು; ಹುರುಪು ತುಂಬಲಿರುವ ಪಿಎಂ
ಅಲ್ಲದೇ, ಕಾಯಿದೆ ಜಾರಿಯಾದ 20 ವರ್ಷದ ನಂತರ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಅದೂ ಸರಿಯಾಗಿ ಜಾರಿಯಾಗಲಿಲ್ಲವೆಂದರೆ ಹೇಗೆ? ಹೀಗಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ತಮ್ಮ ವಿವೇಚನೆ ಬಳಸಿ ವಾಸ್ತವವಾಗಿ ಎಷ್ಟು ಮಾಪಕಗಳ ಅಗತ್ಯವಿದೆ ಎಂಬುದನ್ನು ಜುಲೈ 22ರೊಳಗೆ ಪ್ರಮಾಣಪತ್ರದ ಮೂಲಕ ತಿಳಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಸರ್ಕಾರಿ ವಕೀಲರ ಬದಲಾವಣೆಗೆ ಬೇಸರ: ವಿಚಾರಣೆ ವೇಳೆ ಸರ್ಕಾರದ ಪರ ವಕೀಲರನ್ನು ಬದಲಾಯಿಸಿದ ಕುರಿತು ಪೀಠ ಬೇಸರ ವ್ಯಕ್ತಪಡಿಸಿತು. ನ್ಯಾಯಾಲಯದ ಅನುಮತಿ ಇಲ್ಲದೆ ಬದಲಿಸಿದ್ದೇಗೆ? ಎಂದು ಸರ್ಕಾರವನ್ನು ಕಟುವಾಗಿ ಪ್ರಶ್ನಿಸಿತು. ಅಲ್ಲದೇ, ವಕೀಲರು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹೊಸದಾಗಿ ಪ್ರಮಾಣಪತ್ರ ಸಲ್ಲಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಕ್ಕೆ ತೀವ್ರ ಅಸಾಮಾಧಾನ ವ್ಯಕ್ತಪಡಿಸಿತು.