ಬೆಂಗಳೂರು: ಇಂದಿನ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ನಡೆಯುವ ವಿಜಯದ ಯಾತ್ರೆಯಾಗಿದೆ. ಮುಂದೆ ಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸೀಟು ಗೆದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಅಧಿಕಾರಕ್ಕೇರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ: ನಗರದ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ರಾಜ್ಯದಲ್ಲಿ ನಿಶ್ಚಿತವಾಗಿ ಗುರಿಯನ್ನು ತಲುಪಿ, ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ. ಯಾವುದೇ ಶಕ್ತಿ ಕೂಡ ನಾವು ಅಧಿಕಾರಕ್ಕೆ ಬರೋದನ್ನ ತಡೆಲು ಸಾಧ್ಯವಿಲ್ಲ ಅಂತ ನಾವೆಲ್ಲ ಮನವರಿಕೆ ಮಾಡಿಕೊಡಬೇಕಿದೆ ಎಂದರು.
ಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆ: ಮೋದಿ ಕಾರ್ಯಕ್ರಮ, ಕೆಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಕಳೆದ ಮೂರು ವರ್ಷದಲ್ಲಿ ಕೊಟ್ಟ ಕಾರ್ಯಕ್ರಮ. ಇದನ್ನೆಲ್ಲಾ ಕಾರ್ಯಕರ್ತರು ಅರ್ಥ ಮಾಡಿಕೊಂಡು ಮನೆ ಮನೆಗೆ ತಲುಪಿಸಬೇಕು. ಕೇಂದ್ರ ಹಾಗೂ ರಾಜ್ಯದ ಯೋಜನೆ ಅರ್ಥ ಮಾಡಿಕೊಂಡು ಜನರಿಗೆ ತಲುಪಿಸೋ ಕೆಲಸ ಮಾಡಬೇಕಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆ ರೂಪಿಸೋ ಮೂಲಕ ಸುಧಾರಣೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ.
ರಾಜ್ಯದ ಮೂಲೆ ಮೂಲೆಗಳಲ್ಲಿ ಅನೇಕ ವರ್ಷದಲ್ಲಿ ಮನೆಗಳಿಗೆ ವಿದ್ಯುತ್ ಇರಲಿಲ್ಲ. ಅಲ್ಲಿ ವಿದ್ಯುತ್ ಕೊಡುವ ಕೆಲಸ ಮಾಡಿದ್ದೇವೆ. ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಜನರ ಮನೆ ತಲುಪಿದ್ದೇವೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ನೇರ ಬ್ಯಾಂಕ್ ಖಾತೆಗೆ ಹಣ ಹಾಕಲಾಗಿದೆ. ಹಿಂದೆಲ್ಲ ಮುಖಂಡರ ಕೈಬಿಸಿ ಮಾಡಿದರೆ ಮಾತ್ರ ಸೌಲಭ್ಯದ ಹಣ ಸಿಗುತ್ತಿತ್ತು.
ಆದರೆ, ಪಿಎಂ ಕಾಳಜಿ ಕಾರಣದಿಂದ ಸವಲತ್ತು, ಇಂದು ಮಧ್ಯವರ್ತಿಗಳ ಪಾಲಾಗದೇ ಫಲಾನುಭವಿಗಳಿಗೆ ಸಿಗುವಂತಾಗಿದೆ. ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದು, ಮಧ್ಯಮ ವರ್ಗ, ಬಡವರಿಗೆ ಪಡಿತರ ತಲುಪಿಸಲಾಗುತ್ತಿದೆ. ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸೇರಿ ಹಲವು ಯೋಜನೆ ಜನರಿಗೆ ತಲುಪಿಸಿದ್ದೇವೆ ಎಂದು ಹೇಳಿದರು.
ಯೋಜನೆಗಳಿಗೆ ಅನುಮೋದನೆ: ಈ ಬಾರಿ ಸಕಾಲಕ್ಕೆ ಮಳೆ ಬಂದು ಕರೆಕಟ್ಟೆ, ಜಲಾಶಯ ಭರ್ತಿಯಾಗಿವೆ. ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ಕೊಡುವ ಕೆಲಸ ಮಾಡಲಾಗುತ್ತಿದೆ. ಎತ್ತಿನಹೊಳೆಗೆ 3 ಸಾವಿರ ಕೋಟಿ ಯುಕೆಪಿ ಮೂರನೇ ಹಂತಕ್ಕೆ ಗೆ 5 ಸಾವಿರ, ಮಹದಾಯಿಗೆ 1 ಸಾವಿರ, ಮೇಕೆದಾಟಿಗೆ 1 ಸಾವಿರ ಅನುದಾನ ಒದಗಿಸಲಾಗಿದೆ. ಒಟ್ಟು 50 ನೀರಾವರಿ ಯೋಜನೆ 6,574 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ: ರೈತ ವಿದ್ಯಾನಿಧಿ ಯೋಜನೆಯಲ್ಲಿ 10 ಲಕ್ಷ ಮಕ್ಕಳಿಗೆ 440 ಕೋಟಿ ವಿದ್ಯಾರ್ಥಿ ವೇತನ ವಿತರಿಸಲಾಗಿದೆ. ನೇಕಾರರು, ಕೃಷಿ ಕಾರ್ಮಿಕರು, ಮೀನುಗಾರರಿಗೆ, ಹಳದಿ ಬೋರ್ಡ್ ಟ್ಯಾಕ್ಸಿ ಚಾಲಕರು, ಆಟೋಚಾಲಕರ ಮಕ್ಕಳಿಗೆ ಸಹಾಯ ಒದಗಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರುತ್ತಿರುವ ಮೊದಲ ರಾಜ್ಯ ನಮ್ಮದು.
15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಮಾಡಲಾಗುತ್ತಿದೆ. ಕೊರತೆ ಇರುವ ಶಾಲಾ ಕೊಠಡಿಗಳ ನಿರ್ಮಾಣ, ಎಲ್ಲ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಕೋರ್ ಕಮಿಟಿ ಸಭೆ: ಎಸ್ಟಿ ಮೀಸಲಾತಿ ಹೆಚ್ಚಿಸುವಂತೆ ಸಿಎಂಗೆ ಮನವಿ
ನಮ್ಮ ರಾಜ್ಯ ಪ್ರವಾಸದ ವೇಳೆ ಲಕ್ಷಾಂತರ ಜನ ಸೇರಿ ಜನರಿಗೆ ನಮ್ಮ ಯೋಜನೆಗಳನ್ನು ತಿಳಿಸುವ ಪ್ರಯತ್ನ ಮಾಡಬೇಕಿದೆ. ನಾಲ್ಕೈದು ಲಕ್ಷ ಜನ ಸೇರಿಸಿ ಸಮಾವೇಶ ಮಾಡಬೇಕು. ದೊಡ್ಡ ಕಾರ್ಯಕ್ರಮ ಮಾಡಬೇಕು ಎಂದು ಚರ್ಚೆ ಆಗಿದ್ದು, ದಿನಾಂಕ ನಿಶ್ಚಯವಾಗಿದೆ. ನಮ್ಮ ನಡೆ ವಿಜಯದ ಕಡೆಗೆ ಎಂದು ಹೊರಡಬೇಕು, ಚುನಾವಣೆಯಲ್ಲಿ 140 -150 ಸ್ಥಾನ ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಹುಲ್ ಪ್ರವಾಸ ಹಾಸ್ಯಾಸ್ಪದ: ಕಾಂಗ್ರೆಸ್ ಬೂಟಾಟಿಕೆ ಕಾರ್ಯಕ್ರಮ ಯಾರಿಗೂ ತಲುಪಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ಸರ್ವನಾಶವಾಗಿದೆ. ನಿಮ್ಮ ಅಡ್ರಸ್ಸೇ ಇಲ್ಲ, ಒಂದೆರಡು ರಾಜ್ಯ ಬಿಟ್ಟರೆ ನಿಮ್ಮ ಆಳ್ವಿಕೆ ಇಲ್ಲ. ಯಾತ್ರೆ ಮೂಲಕ ಕರ್ನಾಟಕದಲ್ಲಿ ಏನೋ ಕಡಿಯುತ್ತೇನೆ ಎಂದು ಬಂದಿರುವುದು ಹಾಸ್ಯಾಸ್ಪದವಾಗಿದೆ ಎಂದು ರಾಹುಲ್ ಗಾಂಧಿ ಹೆಸರೇಳದ ವಾಗ್ದಾಳಿ ನಡೆಸಿದರು.
ಶಾಸಕರು, ಸಚಿವರು ಇನ್ನು ಐದು ತಿಂಗಳು ರಾಜ್ಯದಲ್ಲಿ ಪ್ರವಾಸ ಮಾಡಿ ಕಾರ್ತಕರ್ತರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಿದರೆ, ಮತ್ತೆ ಐದು ವರ್ಷ ಅಧಿಕಾರದಲ್ಲಿರಬಹುದು. ಜಿಲ್ಲಾ ಉಸ್ತಯವಾರಿ ಸಚಿವರು ಜಿಲ್ಲೆಗೆ ಸೀಮಿತವಾಗದೇ, ರಾಜ್ಯಾದ್ಯಂತ ಪ್ರವಾಸ ಮಾಡಬೇಕು. ಒಡಕಿನ ಮಾತಿಗೆ ಅವಕಾಶ ಕೊಡದೇ ಸಂಘಟನೆ ಕಡೆ ವಿಶೇಷ ಗಮನ ಕೊಡಿ ಎಂದು ಸಲಹೆ ನೀಡಿದರು.