ಬೆಂಗಳೂರು: ಕೇರಳ-ಕರ್ನಾಟಕ ಗಡಿ ಭಾಗದ ಜಿಲ್ಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ತರಗತಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭರವಸೆ ನೀಡಿದ್ದಾರೆ.
ಕರ್ನಾಟಕ-ಕೇರಳ ಗಡಿ ಭಾಗದ ಸಮಸ್ಯೆ, ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವ ವಿಚಾರ ಸೇರಿದಂತೆ ಹಲವು ವಿಚಾರ ಮುಂದಿಟ್ಟು ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೂ.29 ರಂದು ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿ ಪಿಣರಾಯಿ ವಿಜಯನ್ ಪತ್ರದ ಮೂಲಕ ಉತ್ತರದ ಭರವಸೆ ನೀಡಿದ್ದಾರೆ.
ಸಿದ್ದರಾಮಯ್ಯಗೆ ಬರೆದ ಪತ್ರದಲ್ಲಿ ಅವರು, ಜೂನ್ 29, 2021ರ ನಿಮ್ಮ ಪತ್ರವನ್ನು ನಾನು ಸ್ವೀಕರಿಸಿದ್ದೇನೆ. ಕಾಸರಗೋಡು ಜಿಲ್ಲೆಯ ಯಾವುದೇ ಹಳ್ಳಿಯ ಹೆಸರನ್ನು ಬದಲಾಯಿಸಲು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ವಿಷಯದಲ್ಲಿ ಯಾವುದೇ ಆತಂಕಗಳು ಬೇಡ ಎಂದು ಈ ಮೂಲಕ ನಾನು ನಿಮಗೆ ಭರವಸೆ ನೀಡುತ್ತೇನೆ. ನೀವು ವ್ಯಕ್ತಪಡಿಸಿದ ಭಾವನೆಗಳನ್ನು ನಾವು ಸಂಪೂರ್ಣವಾಗಿ ಪ್ರಶಂಸಿಸುತ್ತೇವೆ ಎಂದಿದ್ದಾರೆ.
ಮುಂದುವರಿದು, ಎರಡೂ ರಾಜ್ಯಗಳ ಜನರಲ್ಲಿ ಸಾಮರಸ್ಯ ಮತ್ತು ಬಾಂಧವ್ಯವನ್ನು ಬಲಪಡಿಸುವುದು ನಮ್ಮ ಉದ್ದೇಶ ಕೂಡ ಆಗಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ನಮ್ಮ ರಾಜ್ಯದಲ್ಲಿ ಎಲ್ಲಾ ಶಾಲೆಗಳು ಮುಚ್ಚಲ್ಪಟ್ಟಿವೆ ಮತ್ತು ತರಗತಿಗಳನ್ನು ಆನ್ಲೈನ್ನಲ್ಲಿ ನಡೆಸಲಾಗುತ್ತಿದೆ. ಸ್ಥಳೀಯ ಕೇಬಲ್ ಚಾನಲ್ಗಳ ಮೂಲಕ ಕನ್ನಡ ಮಾಧ್ಯಮದಲ್ಲಿಯೇ ತರಗತಿಗಳಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದ್ದಾರೆ.
ಸಿದ್ದರಾಮಯ್ಯ ಪತ್ರದಲ್ಲಿ ಏನಿತ್ತು?
ಜೂ.29 ರಂದು ಸಿದ್ದರಾಮಯ್ಯ ಬರೆದ ಪತ್ರದಲ್ಲಿ, ಕರ್ನಾಟಕ ಮತ್ತು ಕೇರಳ ಯಾವಾಗಲೂ ಸೌಹಾರ್ದಯುತ ಬಾಳ್ವೆ ಹಂಚಿಕೊಂಡು ಬಂದಿವೆ. ಸಾಮರಸ್ಯದಿಂದ ಸಹಬಾಳ್ವೆ ನಡೆಸುತ್ತಿವೆ. ನಮ್ಮ ರಾಜ್ಯಗಳ ಗಡಿ ಪ್ರದೇಶಗಳು ಕನ್ನಡಿಗರು ಮತ್ತು ಕೇರಳಿಗರು ಅನಾದಿ ಕಾಲದಿಂದಲೂ ಸಹೋದರ ಸಹೋದರಿಯರಂತೆ ಒಟ್ಟಿಗೆ ವಾಸಿಸುತ್ತಿದ್ದಾರೆ. ಕಾಸರಗೋಡಿನ ಸ್ಥಳೀಯ ಸಂಸ್ಥೆಗಳು ಕಾಸರಗೋಡಿನ ಕೆಲವು ಹಳ್ಳಿಗಳ ಹೆಸರನ್ನು ಬದಲಾಯಿಸಲು ನಿರ್ಧಾರ ತೆಗೆದುಕೊಳ್ಳುತ್ತಿರುವುದು ವರದಿಯಾಗಿದೆ. ಅವರ ಹೆಸರುಗಳು ಕನ್ನಡ ಮತ್ತು ತುಳುದಿಂದ ಬಂದಿರುವುದಾಗಿವೆ.
ಕೇರಳ ರಾಜ್ಯಕ್ಕೆ ಸೇರಿದ್ದರು ಸಹ ಕಾಸರಗೋಡಿನ ಜನರು ಕನ್ನಡದೊಂದಿಗೆ ವಿಶಿಷ್ಟ ಸಂಬಂಧವನ್ನು ಹೊಂದಿದ್ದಾರೆ. ಮತ್ತು ಹಳ್ಳಿಯ ಹೆಸರುಗಳೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಬೆಳೆಸಿಕೊಂಡಿದ್ದಾರೆ. ಕಾಸರಗೋಡಿನ ಕನ್ನಡ ಶಾಲೆಗಳ ಮುಚ್ಚುವಿಕೆಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಂಡರೂ ಸಮಸ್ಯೆ ಎದುರಾಗಲಿದೆ. ಅನೇಕ ಕುಟುಂಬಗಳು ತಮ್ಮ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡಲಿ ಎಂದು ಬಯಸುತ್ತಾರೆ ಮತ್ತು ರಾಜ್ಯಗಳು ಇದನ್ನು ಪ್ರೋತ್ಸಾಹಿಸುವುದರಿಂದ ಭಾಷಾ ವೈವಿಧ್ಯತೆಯನ್ನು ಬಲಪಡಿಸಿದಂತೆ ಆಗುತ್ತದೆ. ಪ್ರಾದೇಶಿಕ ಅಸಮಾನತೆ ಉಂಟಾಗದಂತೆ ಕೇರಳ ಸರ್ಕಾರ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಿದೆ ಎಂದು ನಂಬಿದ್ದೇನೆ ಎಂದಿದ್ದರು.