ಬೆಂಗಳೂರು: ಕೋವಿಡ್-19ಗೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ದಾಖಲೆಗಳಿಗೆ ಸಂಬಂಧಿಸಿದಂತೆ ತಮ್ಮ ಬಳಿ ಯಾವುದೇ ಪೆನ್ ಡ್ರೈವ್ ಇಲ್ಲ ಎಂದು ಬೀಳಗಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಲು ಖರೀದಿ ಮಾಡಿರುವ ವೈದ್ಯಕೀಯ ಸಲಕರಣೆಗಳಲ್ಲಿ ಭ್ರಷ್ಟಾಚಾರ ನಡೆದಿದ್ದು, ಅದಕ್ಕೆ ಸಂಬಂಧಿಸಿದ 125 ಪುಟಗಳ ದಾಖಲೆಗಳ ಪೆನ್ ಡ್ರೈವ್ ತಮ್ಮ ಬಳಿ ಇದೆ ಎಂದು ಕೆಲವು ಸಾಮಾಜಿಕ ಜಾಲತಾಣಗಳು, ವೆಬ್ ಪೋರ್ಟಲ್ಗಳು ಹಾಗೂ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ.
ಬಿಜಾಪುರದಿಂದ ಬರುವಾಗ ನನ್ನೊಂದಿಗೆ ಒಬ್ಬರು ಅಧಿಕಾರಿ ಬಂದಿದ್ದರು. ಸುಮಾರು 125 ಪುಟಗಳ ದಾಖಲೆಗಳ ಪೆನ್ ಡ್ರೈವ್ ತಂದಿದ್ದು, ಅದನ್ನು ತಮಗೆ ಕಳುಹಿಸಿಕೊಡುತ್ತೇನೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಆದರೆ ಇದು ಸತ್ಯಕ್ಕೆ ಅತ್ಯಂತ ದೂರವಾದ ಸಂಗತಿಯಾಗಿದೆ ಎಂದಿದ್ದಾರೆ.
ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಖರೀದಿಸಿರುವ ವೆಂಟಿಲೇಟರ್, ಪಿಪಿಇ ಕಿಟ್, ಮುಖಗವಸು, ಸರ್ಜಿಕಲ್ ಕೈಗವಸು, ಪರೀಕ್ಷೆ ಕೈಗವಸು, ಆಮ್ಲಜನಕ ಸಿಲಿಂಡರ್, ಸೋಂಕಿತರ ದಿನದ ಖರ್ಚು ಸೇರಿದಂತೆ ಇತರೆ ವೆಚ್ಚಗಳ ದಾಖಲೆಗಳಿರುವ 125 ಪುಟಗಳ ಯಾವ ಪೆನ್ ಡ್ರೈವ್ ಕೂಡ ತಮ್ಮ ಬಳಿ ಇಲ್ಲ ಎಂದು ಮುರುಗೇಶ್ ನಿರಾಣಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.