ಬೆಂಗಳೂರು : ನಗರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ನಿಯಂತ್ರಣದಲ್ಲಿವೆ. ದಿನವೂ 60 ಸಾವಿರ ಟೆಸ್ಟಿಂಗ್ ನಡೆಸಲಾಗುತ್ತಿದ್ದರೂ 400 ಪ್ರಕರಣ ಮಾತ್ರ ಪಾಸಿಟಿವ್ ಬರುತ್ತಿವೆ. ಅಂದರೆ ಪ್ರಮಾಣ 0.6% ಅಷ್ಟೇ ಇದೆ. ಹೀಗಾಗಿ, ವೀಕೆಂಡ್ ಕರ್ಫ್ಯೂ ಅನಿವಾರ್ಯತೆ ಇಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಬೆಂಗಳೂರಿನಲ್ಲಿ 40 ದಿನಗಳಲ್ಲಿ ಸರಾಸರಿ 400 ರಿಂದ 500 ಇದ್ದ ಪ್ರಕರಣಗಳು ಸದ್ಯ 380ಕ್ಕೆ ಇಳಿಕೆಯಾಗಿವೆ. ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಎಂದ್ರು. ಕಳೆದ ನಾಲ್ಕು ದಿನಗಳಿಂದ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡಿವೆ. ಯಾವುದೇ ಪರಿಸ್ಥಿತಿ ಎದುರಿಸಲು ಪಾಲಿಕೆ ಸಿದ್ಧತೆ ಮಾಡಿಕೊಳ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಎರಡನೇ ಡೋಸ್ಗೂ ಹೆಚ್ಚಿನ ಒತ್ತು : ಜನರೂ ನೈಟ್ ಕರ್ಫ್ಯೂ, ಮಾಸ್ಕ್, ಸಾಮಾಜಿಕ ಅಂತರ ಸೇರಿ ಕೋವಿಡ್ ನಿಯಂತ್ರಣದ ಮಾರ್ಗಸೂಚಿಯನ್ನು ಶಿಸ್ತಿನಿಂದ ಪಾಲಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಹೇಳಿದ್ರು. ಶೇ.70ಕ್ಕಿಂತ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಎರಡನೇ ಡೋಸ್ಗೂ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಸಿಎಂ ಬಿ ಎಸ್ ಬೊಮ್ಮಾಯಿ ಸಭೆ : ಇಂದು ಕೋವಿಡ್-19 ಪರಿಸ್ಥಿತಿ ಬಗ್ಗೆ ಸಿಎಂ ಸಭೆ ನಡೆಸಲಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಪರಿಸ್ಥಿತಿಯನ್ನು ಅವಲೋಕಿಸಲಾಗುವುದು. ಸಭೆಯಲ್ಲಿ ತಜ್ಞ ವೈದ್ಯರು ಇರಲಿದ್ದಾರೆ. ಅವರ ವಿಶ್ಲೇಷಣೆಗಳನ್ನೂ, ಅಭಿಪ್ರಾಯವನ್ನೂ ತಿಳಿಸ್ತಾರೆ. ನಮ್ಮ ನಿಲುವುಗಳನ್ನ ನಾವು ಸಭೆಯಲ್ಲಿ ಹೇಳಲಿದ್ದೇವೆ ಎಂದರು.
ಬ್ರೇಕ್ ಥ್ರೂ ಇನ್ಫೆಕ್ಷನ್ : ಎರಡೂ ಡೋಸ್ ಲಸಿಕೆ ಪಡೆದವರಿಗೆ ಸೋಂಕು ಬರುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಇದನ್ನು ಬ್ರೇಕ್ ಥ್ರೂ ಇನ್ಫೆಕ್ಷನ್ ಎನ್ನಲಾಗುತ್ತೆ. ವಿಶ್ವದಾದ್ಯಂತ ಇದು ನಡೆಯುತ್ತಿದೆ. ಆದ್ರೆ, ಲಸಿಕೆ ಪಡೆದವರಿಗೆ ಸೋಂಕು ಉಲ್ಭಣಿಸೋದಿಲ್ಲ. ಹೀಗಾಗಿ, ಲಸಿಕೆ ಪಡೆದವರೂ ಕೋವಿಡ್ ರೂಲ್ಸ್ ಪಾಲಿಸಬೇಕು ಎಂದರು.
ಜಿನೋಮ್ ಸ್ವೀಕ್ವೆನ್ಸಿಂಗ್ ರಾಷ್ಟ್ರ, ರಾಜ್ಯ ಹಾಗೂ ನಗರ ಮಟ್ಟದಲ್ಲಿಯೂ ಮಾಡಲಾಗುತ್ತಿದೆ. ಸದ್ಯ ಶೇ.70ರಷ್ಟು ಡೆಲ್ಟಾ ವೈರಸ್ ಕಾಣುತ್ತಿದೆ. ಕಳೆದ ನಾಲ್ಕು ತಿಂಗಳಿಂದಲೂ ಡೆಲ್ಟಾ ವೈರಸ್ ಹೆಚ್ಚಾಗಿ ಕಂಡು ಬರುತ್ತಿದೆ ಎಂದರು.
ಶಾಲೆ ಆರಂಭಿಸುವ ಬಗ್ಗೆ ಸಿಎಂ ಸೂಚನೆ : ಈಗಿನ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಸಿಎಂ ನಿರ್ಧಾರ ತೆಗೆದುಕೊಂಡಿದ್ದಾರೆ. 9ರಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭಿಸುವ ಬಗ್ಗೆ ಸಿಎಂ ಸೂಚನೆ ನೀಡಿದ್ದಾರೆ. ಇಂದಿನ ಸಭೆಯಲ್ಲಿ ಮತ್ತೆ ಚರ್ಚೆಗಳಾಗುವ ಸಾಧ್ಯತೆ ಇದೆ ಎಂದರು.
ಕೇರಳ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ನೆಗೆಟಿವ್ ಟೆಸ್ಟ್ ಕಡ್ಡಾಯ. ಈವರೆಗೆ ಹತ್ತು ಸಾವಿರಕ್ಕೂ ಹೆಚ್ಚು ಜನರನ್ನು ಟೆಸ್ಟ್ ಮಾಡಲಾಗಿದೆ. ಒಬ್ಬರಲ್ಲೂ ಪಾಸಿಟಿವ್ ರಿಪೋರ್ಟ್ ಬಂದಿಲ್ಲ. ಆದರೂ ಟೆಸ್ಟ್ ರಿಪೋರ್ಟ್ ಇಲ್ಲವಾದಲ್ಲಿ ಹೋಂ ಕ್ವಾರಂಟೈನ್ನಲ್ಲಿದ್ದು, ನಿಗಾವಹಿಸುವುದು ಅಗತ್ಯ ಎಂದರು.
ಕೋವಿಡ್ ಹೆಚ್ಚಾಗಿ ಹೊರವಲಯದಲ್ಲೇ ಕಂಡು ಬರುತ್ತಿರುವುದಕ್ಕೆ ಕಾರಣ ಟ್ರಾವೆಲ್ ಹಿಸ್ಟರಿ ಎಂದ್ರು. ಇನ್ನು, ಅಪಾರ್ಟ್ಮೆಂಟ್ಗಳಲ್ಲಿ ಸಭೆ-ಸಮಾರಂಭಗಳು, ಇತರ ಜನ ಸೇರುವ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಕೊರೊನಾ ಹೆಚ್ಚಾಗಿದೆ. ಈ ಹಿನ್ನೆಲೆ ಅಪಾರ್ಟ್ಮೆಂಟ್ಗಳಿಗೆ ಕೊರೊನಾ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದರು.