ಬೆಂಗಳೂರು : ಸರ್ಕಾರದ ಜಾಗದಲ್ಲಿರುವ ಆಸ್ತಿಯ ವಿಚಾರದಲ್ಲಿ ಖಾಸಗಿಯವರು ಇದು ತಮ್ಮದು ಎಂದು ಹೇಳಿಕೊಂಡಾಗ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸಚಿವ ಮುನಿರತ್ನ ತಿಳಿಸಿದ್ದಾರೆ. ನಿಯಮ 72 ರ ಅಡಿ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಗಮನ ಸೆಳೆಯುವ ಸೂಚನೆ ಮೇಲಿನ ಚರ್ಚೆಯಡಿ ಮಾತನಾಡಿ, ಬೆಂಗಳೂರು ಕಸಬಾ ಹೋಬಳಿ ಅಣ್ಣೀಪುರ ಗ್ರಾಮದ ತಕರಾರಿನ ಸ್ಥಳ ಹಾಪ್ ಕಾಮ್ಸ್ ಗೆ ಸೇರಿದ್ದು. ಇದರ ವಿಚಾರವಾಗಿ ನನ್ನ ಮೇಲೂ ಸಾಕಷ್ಟು ಒತ್ತಡ ಇದೆ.
ನ್ಯಾಯಾಲಯದ ಮೆಟ್ಟಿಲು ಸಹ ಏರಿದೆ. ಲಾಲ್ಭಾಗ್ಗೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ 44 ವರ್ಷದಿಂದ ಹಾಪ್ಕಾಮ್ಸ್ ಇದೆ. ಚರಿಶ್ಮಾಬಿಲ್ಡರ್ಸ್ 2017 ರಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ನೈಜತೆ ಬಗ್ಗೆ ಪರಿಶೀಲಿಸದೇ ನಿರ್ಧಾರ ಆಗದು. ಲೋಕಾಯುಕ್ತಕ್ಕೆ ವಹಿಸಿ ಕೂಲಂಕಷ ತನಿಖೆ ಆಗಬೇಕು. ತನಿಖೆಯ ಬಳಿಕ ಸತ್ಯ ಸಂಗತಿ ಅರಿವಾಗಲಿದೆ ಎಂದು ಹೇಳಿದರು. ದಾನಪತ್ರದ ಮೂಲಕ ಆರೋಪಿಸಿರುವ ವ್ಯಕ್ತಿಯ ಕುಟುಂಬಕ್ಕೆ ಭೂಮಿ ನೀಡಲಾಗಿದೆ. ಇದರಿಂದ ಈ ಬಗ್ಗೆ ಗಮನಹರಿಸಿ ಎಂದು ಮನವಿ ಮಾಡಿದರು.
ಜನೌಷಧ ವಿಚಾರವಾಗಿ ಯಾವುದೇ ಸಮಸ್ಯೆ ಇಲ್ಲ : ಜನೌಷಧ ವಿಚಾರವಾಗಿ ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್ ಗಮನ ಸೆಳೆದಾಗ ಉತ್ತರಿಸಿದ ಸಭಾ ನಾಯಕರು, ಹತ್ತಕ್ಕೆ ಏಳು ಮಂದಿ ಜನೌಷಧ ಕೇಂದ್ರವನ್ನು ಬಳಸುತ್ತಾರೆ. ಸೂಕ್ತ ಔಷಧ ನೀಡಿಕೆ ಆಗುತ್ತಿದೆ. ಅಗತ್ಯ ಅನುದಾನ ಬಿಡುಗಡೆ ಆಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದರು.
ಆದರೆ, ಸಲೀಂ ಅಹ್ಮದ್ ಮಾತನಾಡಿ, ಮಾಧ್ಯಮಗಳಲ್ಲಿ ಸತ್ಯ ಪ್ರಕಟವಾಗಿದೆ. ಯೋಜನೆ ಎಲ್ಲಾ ವರ್ಗದ ಜನರಿಗೆ ಸಿಗುತ್ತಿಲ್ಲ. ಲಾಬಿ ಸಹ ನಡೆಯುತ್ತಿದೆ. ಜನೌಷಧಿ ಕೇಂದ್ರದ ವಿರುದ್ಧ ವೈದ್ಯಕೀಯ ಕ್ಷೇತ್ರದ ವ್ಯವಸ್ಥಿತ ಲಾಬಿ ನಡೆಯುತ್ತಿದೆ. ಸಮಾಧಾನಕರ ಉತ್ತರ ನನಗೆ ಸಿಕ್ಕಿಲ್ಲ. ಚರ್ಚಿಸುವ ಅಗತ್ಯವಿದೆ. ಸಚಿವರು ಬಂದ ಮೇಲೆ ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಸದಸ್ಯರು ಗಮನಕ್ಕೆ ತಂದ ವಿಚಾರ ಗಂಭೀರವಾಗಿದ್ದು ಆರೋಪಿಸಿರುವ ಧಾರವಾಡದ ವೈದ್ಯರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಆರೋಗ್ಯ ಸಚಿವರ ಜತೆ ನೇರ ಚರ್ಚೆಗೆ ಅವಕಾಶ ನೀಡುತ್ತೇವೆ ಎಂದು ಸಭಾನಾಯಕರು ಹೇಳಿದರು.
ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್ ಗಮನ ಸೆಳೆದ, ಚಿಂತಾಮಣಿಯ ನಿರ್ಬಂಧಿತ ಭೂಮಿಯಲ್ಲಿ ಅಕ್ರಮ ಕಟ್ಟಡ ನಿರ್ಮಿಸಿದ್ದು, ಕಂದಾಯ ಸಚಿವರಿಗೆ ವಿವರಿಸಿ ಕ್ರಮಕ್ಕೆ ಸೂಚಿಸುವುದಾಗಿ ಸಭಾ ನಾಯಕರು ತಿಳಿಸಿದರು. ಅತಿಕ್ರಮಣ ಮಾಡಿಕೊಂಡ ಕೃಷ್ಣಾರೆಡ್ಡಿ ಪ್ರಭಾವಿ ವ್ಯಕ್ತಿಯಾಗಿದ್ದು, ಜಿಲ್ಲಾಧಿಕಾರಿ ಸಹ ಇವರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ ಎಂದರು. ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ. ಈಗ ಇಲ್ಲಿ ತಲೆತೂರಿಸುವಂತಿಲ್ಲ. ಇದು ಇತ್ಯರ್ಥವಾದ ಬಳಿಕ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆ ನೀಡಿದರು.
ನಿಯಮ 330 ಚರ್ಚೆ : ನಿಯಮ 330 ರ ಅಡಿ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡರು, ಚಿಂತಾಮಣಿಯಲ್ಲಿ ಜಲ್ಲಿ ಕ್ರಶರ್ ಅಕ್ರಮವಾಗಿ ನಡೆಯುತ್ತಿದೆ. ಡ್ರೋಣ್ ಸರ್ವೆ ಮಾಡಲು ಸಹ ಮನವಿ ಮಾಡಿದ್ದೆ. ಆದರೆ, ಇದುವರೆಗೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಕೋವಿಡ್ ಮುನ್ನ ಅಕ್ರಮ ಆಗಿರದಿರಬಹುದು. ಕೋವಿಡ್ ಸಂದರ್ಭದಲ್ಲಿ ಒಂದೂವರೆ ವರ್ಷ ಕೆಲಸ ನಡೆದಿರಲಿಲ್ಲ. ನಂತರ 2 ಸಾವಿರ ಲೋಡ್ ಕಲ್ಲು ಅಕ್ರಮವಾಗಿ ತೆಗೆಯಲಾಗಿದೆ ಎಂಬ ಮಾಹಿತಿ ಇದೆ ಎಂದರು.
ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಡ್ರೋಣ್ ಸರ್ವೆ ಆಗಿದೆ. ಹಿರಿಯ ಭೂ ವಿಜ್ಞಾನ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಐದು ಎಕರೆ ವಿಸ್ತಾರದ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಅಗತ್ಯಕ್ಕಿಂತ ಹೆಚ್ಚುವರಿ ಗಣಿಗಾರಿಕೆ ನಡೆದಿರುವುದು ಗಮನಕ್ಕೆ ಬಂದಿದ್ದು, ಐದು ಪಟ್ಟು ಶುಲ್ಕ ಪೆನಾಲ್ಟಿ ಹಾಕಲಾಗಿದೆ. ದಂಡ ಕಟ್ಟಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ನಿಯಮ ಉಲ್ಲಂಘಿಸಿದ್ದು ಗಮನಕ್ಕೆ ಬಂದಿದ್ದು, ನೋಟಿಸ್ ನೀಡಿ ಕ್ರಮ ಕೈಗೊಂಡಿದ್ದೇವೆ ಎಂದರು. ರಾಜ್ಯದ ಎಲ್ಲ ಗಣಿಗಾರಿಕೆ ಸರ್ವೇ ಮಾಡುತ್ತೇವೆ. ಚಿಕ್ಕಬಳ್ಳಾಪುರಕ್ಕೆ ಆದ್ಯತೆ ನೀಡುತ್ತೇವೆ. ಹಿರಿಯ ಅಧಿಕಾರಿಗಳ ತಂಡದ ಜತೆ ಚರ್ಚಿಸಿ ಸೂಕ್ತ ಇಲಾಖಾ ಕ್ರಮ ಕೈಗೊಳ್ಳುತ್ತೇವೆ ಎಂದರು.
ತುಮಕೂರು ಜಿಲ್ಲೆಯಕುಣಿಗಲ್ ತಾಲ್ಲೂಕಿನ ಹಳ್ಳಿಯೊಂದಕ್ಕೆ ಸಂಪರ್ಕ ವ್ಯವಸ್ಥೆ ಇಲ್ಲ ಎಂಬ ವಿಚಾರವನ್ನು ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ನಿಯಮ 330 ರ ಅಡಿ ಪ್ರಸ್ತಾಪಿಸಿ, ಕೇವಲ ಅರ್ಧ ಕಿ.ಮಿ. ಉದ್ದನೇ ಸೇತುವೆ ಸರ್ಕಾರ ಮಾಡದ ಹಿನ್ನೆಲೆ ಜನ 22 ಕಿ.ಮಿ. ಸುತ್ತಿ ಬರಬೇಕಾಗುತ್ತದೆ. ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಅನುದಾನ ಮೀಸಲಿಡಲಾಗಿದೆ.
ಸರ್ಕಾರ ಕ್ರಮ ಕೈಗೊಳ್ಳದ ಹಿನ್ನೆಲೆ ಹತ್ತಾರು ವರ್ಷದಿಂದ ಮನವಿ ಸಲ್ಲಿಸಲಾಗುತ್ತಿದೆ. ಹತ್ತಾರು ಊರಿಗೆ ಸಂಪರ್ಕ ತಪ್ಪಿದೆ ಎಂದರು. ಸಭಾನಾಯಕರು ಮಾತನಾಡಿ, 75 ಕೋಟಿ ರೂ. ಅಗತ್ಯ. 5 ಕೋಟಿಗೆ ರಸ್ತೆ, 70 ಕೋಟಿಗೆ ಸೇತುವೆ ನಿರ್ಮಾಣ ಆಗಬೇಕು. ಹಣಕಾಸು ಲಭ್ಯತೆ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ. ತಕ್ಷಣ ಆಗಲಿದೆ ಎಂದು ಭರವಸೆ ನೀಡಲು ಸಾಧ್ಯವಿಲ್ಲ. ತಾಂತ್ರಿಕ ಶಕ್ಯತೆ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ನಿಯಮ 330 ರ ಅಡಿ ದಿನಗೂಲಿ ಕಾರ್ಮಿಕರ ಆತ್ಮಹತ್ಯೆ ಕುರಿತು ಕಾಂಗ್ರೆಸ್ ಸದಸ್ಯರಾದ ನಾಗರಾಜ್ ಯಾದವ್, ಪ್ರಕಾಶ್ ರಾಥೋಡ್ ಮಾಡಿದ ಪ್ರಸ್ತಾಪಕ್ಕೆ ಬೆಂಬಲಿಸಿ ಬಿಜೆಪಿ ಸದಸ್ಯರಾದ ಎಚ್. ವಿಶ್ವನಾಥ, ಆಯನೂರು ಮಂಜುನಾಥ್ ಮಾತನಾಡಿದರು. ಉತ್ತರ ನೀಡಿದ ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, 1.89 ಕೋಟಿ ಅಸಂಘಟಿತ ಕಾರ್ಮಿಕರು ಇರಬಹುದೆಂದು ಅಂದಾಜು ಮಾಡಲಾಗಿದೆ.
79 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಇ-ಶ್ರಮ ಅಡಿ ನೋಂದಣಿ ನಡೆಯುತ್ತಿದ್ದು, ಎಲ್ಲರ ನೋಂದಣಿ ನಂತರ ಏನು ಅನುಕೂಲ ಒದಗಿಸಬಹುದು ಎಂದು ಚರ್ಚಿಸುತ್ತೇವೆ ಎಂದರು.
ಅಕ್ರಮ ಮಾಡಿದರೆ ಎದೆ ಮುಟ್ಟಿ ನೋಡಿಕೊಳ್ಳಬೇಕು : ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ. ಸರ್ಕಾರ ಮೂಗು ತೂರಿಸುವ ಕೆಲಸ ಮಾಡುತ್ತಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ವಿಧಾನಸಭೆಯಲ್ಲಿ ಪಿಎಸ್ ಐ ಅಕ್ರಮ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಇನ್ನು ಮುಂದೆ ಯಾರಾದರೂ ಈ ರೀತಿ ಮಾಡಿದರೆ ಎದೆ ಮುಟ್ಟಿ ನೋಡಿಕೊಳ್ಳಬೇಕು. ಆ ರೀತಿಯಲ್ಲಿ ತನಿಖೆ ನಡೆಯುತ್ತಿದೆ ಎಂದರು.
ಹಿಂದಿನ ಪರೀಕ್ಷೆ ಹಗರಣದ ಬಗ್ಗೆ ನಾನು ಮಾತನಾಡಲ್ಲ. ಪರೀಕ್ಷೆ ದುಡ್ಡು ಕೊಟ್ಟು ಕೊಳ್ಳುವ ವಸ್ತುವಾದರೆ ಪ್ರಾಮಾಣಿಕರು, ಬಡವರು ಆಯ್ಕೆ ಆಗಲು ಸಾಧ್ಯವಿಲ್ಲ. ಸಾಕ್ಷ್ಯಾಧಾರಗಳು ಸಿಕ್ಕಿದ ಕೂಡಲೆ ತನಿಖೆಗೆ ಆದೇಶಿಸಿದ್ಧೇವೆ. ಎಡಿಜಿಪಿ ಮಟ್ಟದ ಅಧಿಕಾರಿಗಳನ್ನು ಜೈಲಿಗೆ ಹಾಕಿದ್ದೇವೆ. ಈ ಬಗ್ಗೆ ಸರ್ಕಾರಕ್ಕೆ ಹೆಮ್ಮೆ ಇದೆ ಎಂದರು.
ಇದನ್ನೂ ಓದಿ : ಪಿಎಸ್ಐ ಪರೀಕ್ಷೆ ಹಗರಣ.. ನೀವು ಈವೆಂಟ್ ಮ್ಯಾನೇಜರ್ ಎಂದ ಸಿಎಂ: ನನ್ನನ್ನು ಟಾರ್ಗೆಟ್ ಮಾಡಿದಷ್ಟು ಲಾಭ ಎಂದ ಸಿದ್ದು