ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೊರೊನಾ ಸೋಂಕು ತಗಲಿದ್ದು, ಚಿಕಿತ್ಸೆ ಪಡೆಯಲು ಮಣಿಪಾಲ್ ಆಸ್ಪತ್ರೆ ಸೇರ ಬಯಸಿದ ಅವರಿಗೆ ಬೆಡ್ ಸಿಕ್ಕಿಲ್ಲ.
ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕೆ ಹೋಗಿದ್ದ ಕುಮಾರಸ್ವಾಮಿ ಅವರಿಗೆ ನಿನ್ನೆ ಸಂಜೆಯೇ ಅನಾರೋಗ್ಯ ಕಾಣಿಸಿಕೊಂಡಿದೆ. ಹೀಗಾಗಿ ಬೆಂಗಳೂರಿಗೆ ಮರಳಿದ ಬಳಿಕ ಮನೆಗೆ ಹೋಗದೆ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದಾರೆ. ಇಂದು ಬೆಳಗ್ಗೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆಗೊಳಗಾದ ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ಧೃಢಪಟ್ಟಿದೆ.
ಓದಿ: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಕೊರೊನಾ ದೃಢ
ಮಾಜಿ ಸಿಎಂಗೆ ಸಿಗದ ಬೆಡ್: ವೈದ್ಯರ ಬಳಿ ಮಾತುಕತೆ ನಡೆಸಿ, ತಮ್ಮ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆದು ಚಿಕಿತ್ಸೆ ಪಡೆಯುವುದಾಗಿ ಅವರು ಹೇಳಿದ್ದರು. ಆದರೆ, ವಿಷಯದಲ್ಲಿ ರಿಸ್ಕ್ ಬೇಡ ಎಂದು ವೈದ್ಯರು ಹೇಳಿದ ಕಾರಣ ತಕ್ಷಣವೇ ಆಸ್ಪತ್ರೆಗೆ ಅಡ್ಮಿಟ್ ಆಗಲು ನಿರ್ಧರಿಸಿದ್ದಾರೆ. ಮಣಿಪಾಲ್ ಆಸ್ಪತ್ರೆ ಸೇರಲು ನಿರ್ಧರಿಸಿ, ಸಂಬಂಧಿಸಿದವರನ್ನು ಸಂಪರ್ಕಿಸಿದರೆ, ಬೆಡ್ ಇಲ್ಲ ಎಂದು ಹೇಳಲಾಗಿದೆ.
ಈ ವಿಷಯ ತಿಳಿದ ಕೂಡಲೇ ಆರೋಗ್ಯ ಸಚಿವ ಸುಧಾಕರ್ ಅವರು ಕುಮಾರಸ್ವಾಮಿ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ದೊರಕಿಸಿ ಕೊಡಲು ಯತ್ನಿಸಿದರೂ ಅದು ಫಲ ಕೊಟ್ಟಿಲ್ಲ. ಹೀಗಾಗಿ ಕುಮಾರಸ್ವಾಮಿ ಅವರು ಮತ್ತೊಂದು ಖಾಸಗಿ ಆಸ್ಪತ್ರೆಗೆ ಫೋನು ಮಾಡಿದ್ದು, ಅಲ್ಲಿ ಬೆಡ್ ಸಿಕ್ಕಿದೆ.
ಬೆಡ್ ಸಿಕ್ಕರೂ ಅವರು ತಕ್ಷಣ ಅಡ್ಮಿಟ್ ಆಗಲು ಸಾಧ್ಯವಾಗಿಲ್ಲ: ಬೆಂಗಳೂರು ನಗರದ ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಗೈರುಹಾಜರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಏ.17ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆ ನ್ಯಾಯಾಲಯದ ಮುಂದೆ ಇಂದು ಅವರು ಹಾಜರಾಗಲೇ ಬೇಕಿದೆ. ಆದರೆ, ಕೊರೊನಾ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದು ಅಪಾಯ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ್ದಾರೆ.
ನ್ಯಾಯಾಲಯದ ವಿಚಾರಣೆ ಮುಗಿದ ನಂತರ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲಿದ್ದಾರೆ.
ಇದನ್ನೂ ಓದಿ: ಹೆಚ್‌ಡಿಕೆಗೂ ಡಿನೋಟಿಫಿಕೇಶನ್ ಕಂಟಕ; ಏ.17ರಂದು ವಿಚಾರಣೆಗೆ ಹಾಜರಾಗಲು ಸಮನ್ಸ್