ಬೆಂಗಳೂರು: ಸಾಮಾನ್ಯ ಜನರು ಮಾಸ್ಕ್ ಹಾಕದೇ ಸಿಕ್ಕಿಬಿದ್ದರೆ ಅವರಿಗೆ ದಂಡ ವಿಧಿಸುತ್ತೀರಿ. ಆದರೆ, ರಾಜಕಾರಣಿಗಳ ವಿರುದ್ಧ ಯಾವುದೇ ಕ್ರಮವಿಲ್ಲ. ಬರೀ ಸಾಮಾನ್ಯ ಜನರಿಗಷ್ಟೇ ಕಾನೂನಾ ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ಕಟುವಾಗಿ ಪ್ರಶ್ನಿಸಿದೆ.
ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೋರಿ ಲೆಟ್ಜ್ ಕಿಟ್ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿತು.
ಸಾಮಾನ್ಯ ಜನರು ಮಾಸ್ಕ್ ಹಾಕದೇ ಸಿಕ್ಕಿಬಿದ್ದರೆ 250 ರೂಪಾಯಿ ದಂಡ ವಿಧಿಸುತ್ತೀರಿ. ಆದರೆ, ರಾಜಕಾರಣಿಗಳು ಗಣ್ಯರ ವಿಚಾರಕ್ಕೆ ಬಂದಾಗ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಗಣ್ಯರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವುದು ಫೋಟೋಗಳಲ್ಲೇ ಸ್ಪಷ್ಟವಾಗಿ ಕಾಣುತ್ತಿದೆ. ಹಾಗಿದ್ದೂ ಕ್ರಮ ಜರುಗಿಸಿಲ್ಲ. ಮಾಸ್ಕ್ ಧರಿಸದ ಜನಪ್ರತಿನಿಧಿಗಳ ಮೇಲೆ ಕ್ರಮ ಏಕೆ ಕ್ರಮ ತೆಗೆದುಕೊಂಡಿಲ್ಲ..? ಬದಲಿಗೆ ಕ್ರಮ ಜರುಗಿಸುತ್ತಿದ್ದೇವೆ ಎನ್ನುತ್ತಾ ಕಣ್ಣೊರೆಸುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಅಲ್ಲದೇ ರಾಜಕಾರಣಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿರುವ ನೀವು ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತಿದ್ದೀರಿ. ಅವರ ವಿರುದ್ಧ ಎಫ್ಐಆರ್ ದಾಖಲಿಸಿಲ್ಲವೇಕೆ ಎಂದು ಪ್ರಶ್ನಿಸಿತು. ಈ ವೇಳೆ, ಬಿಬಿಎಂಪಿ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಈವರೆಗೂ 1.94 ಲಕ್ಷ ಜನರಿಗೆ ದಂಡ ವಿಧಿಸಲಾಗಿದೆ. 4.33 ಕೋಟಿ ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದರು.
ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಬಿಜೆಪಿ ಯುವಮೋರ್ಚಾ ರ‌್ಯಾಲಿಯಲ್ಲಿ ಭಾಗವಹಿಸಿದ್ದವರ ವಿರುದ್ಧ ಹಾಗೂ ಆರ್ಆರ್ ನಗರ ಉಪಚುನಾವಣಾ ಪ್ರಚಾರದಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನಿಯಮ ಉಲ್ಲಂಘಿಸಿದವರ ವಿರುದ್ಧ ಎನ್ಸಿಆರ್ ದಾಖಲಿಸಿರುವುದಾಗಿ ಹೇಳಿದ್ದೀರಿ. ಈ ಸಂಬಂಧ ಕೈಗೊಂಡ ಕ್ರಮಗಳೇನು ಎಂಬುದನ್ನು ತಿಳಿಸಿ ಎಂದು ತಾಕೀತು ಮಾಡಿತು.